
ಬೆಂಗಳೂರು: ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೇರಿದ್ದು, ಅರಿವು ಕೇಂದ್ರಗಳ ಮೇಲ್ವಿಚಾರಕರ ಕನಿಷ್ಠ ಮಾಸಿಕ ವೇತನ ಹೆಚ್ಚಳ ಮಾಡಲಾಗಿದೆ.
ಅರಿವು ಕೇಂದ್ರಗಳಲ್ಲಿ ಡಿಜಿಟಲ್ ಕಲಿಕಾ ಸಾಮಗ್ರಿ, ವೃತ್ತಿಪರ ಮಾರ್ಗದರ್ಶನ, ಸಂವಿಧಾನ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ, ನುರಿತ ವ್ಯಕ್ತಿಗಳಿಂದ ಮಾರ್ಗದರ್ಶನ ಮೊದಲಾದ ಸೌಲಭ್ಯ ದೊರೆಯಲಿದೆ.
ಸರ್ಕಾರದ ಯೋಜನೆಗಳ ಮಾಹಿತಿಗಳು ಗ್ರಂಥಾಲಯದಲ್ಲಿ ಓದುಗರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಅರಿವು ಕೇಂದ್ರಗಳ ಕೆಲಸದ ಅವಧಿಯನ್ನು 6 ಗಂಟೆಯಿಂದ 8 ಗಂಟೆಗೆ ಹೆಚ್ಚಳ ಮಾಡಲಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 1 ರಿಂದ ಅರಿವು ಕೇಂದ್ರಗಳಲ್ಲಿ ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1, ಮಧ್ಯಾಹ್ನ 3 ರಿಂದ ಸಂಜೆ 7 ಗಂಟೆವರೆಗೆ, ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ.
ಕೆಲಸದ ಅವಧಿ ಹೆಚ್ಚಳ ಮಾಡಿರುವುದರಿಂದ ಗ್ರಂಥಾಲಯ ಮೇಲ್ವಿಚಾರಕರಿಗೆ 15,196 ರೂ. ಮಾಸಿಕ ಕನಿಷ್ಠ ವೇತನ ಜೊತೆಗೆ ಕಾರ್ಮಿಕ ಇಲಾಖೆ ಕಾಲಕಾಲಕ್ಕೆ ನಿಗದಿಪಡಿಸುವ ತುಟಿ ಭತ್ಯೆ ಪಾವತಿಸಲಾಗುವುದು.