ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ. 7ನೇ ವೇತನ ಆಯೋಗ ವರದಿ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಶೇಕಡ 25 ರಷ್ಟು ವೇತನ ಹೆಚ್ಚಳವಾಗಬಹುದು ಎಂದು ಹೇಳಲಾಗಿದೆ.
ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ನೇತೃತ್ವದ ವೇತನ ಆಯೋಗದ ಅವಧಿ ಮಾರ್ಚ್ 15ಕ್ಕೆ ಮುಕ್ತಾಯವಾಗಲಿದೆ. ಕಳೆದ ವರ್ಷದ ಜೂನ್ ನಲ್ಲಿ ವೇತನ ಪರಿಷ್ಕರಣೆ ಆಗಬೇಕಿತ್ತಾದರೂ ಸರ್ಕಾರ ಆಯೋಗದ ಅವಧಿಯನ್ನು ಆರು ತಿಂಗಳು ವಿಸ್ತರಿಸಿತ್ತು. ಆಯೋಗದ ಅವಧಿ ಮುಕ್ತಾಯವಾಗುತ್ತಿರುವುದರಿಂದ ಯಾವುದೇ ಕ್ಷಣ ವರದಿ ಸಲ್ಲಿಕೆಯಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ಇರುವ ವೇತನ ವ್ಯತ್ಯಾಸವನ್ನು ಸರಿಪಡಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕೆಂಬ ಸರ್ಕಾರಿ ನೌಕರರ ಒತ್ತಾಯಕ್ಕೆ ಸ್ಪಂದಿಸುವ ಸಾಧ್ಯತೆ ಇದೆ.
7ನೇ ವೇತನ ಆಯೋಗ ವರದಿ ಸ್ವೀಕರಿಸಿದ ಕೂಡಲೇ ಶೇಕಡ 25ರಷ್ಟು ವೇತನ ಹೆಚ್ಚಳ ಮಾಡಿ ಜಾರಿಗೊಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ 5.11 ಲಕ್ಷ ಸರ್ಕಾರಿ ನೌಕರರು, 5.62 ಲಕ್ಷ ಪಿಂಚಣಿದಾರರು ಇದ್ದು, ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ತಮಿಳುನಾಡು, ಮಹಾರಾಷ್ಟ್ರ ಸೇರಿ 23 ರಾಜ್ಯಗಳು ಕೇಂದ್ರವೇತನ ಆಯೋಗದ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿ ಮಾಡುತ್ತಿವೆ. ಆದರೆ, ಕರ್ನಾಟಕ, ಉತ್ತರಾಖಂಡ್, ಕೇರಳ, ಪಂಜಾಬ್ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಕೇಂದ್ರದ ವೇತನ ಆಯೋಗದ ಶಿಫಾರಸು ಜಾರಿ ಮಾಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ನಡುವೆ ಶೇಕಡ 67.55 ರಷ್ಟು ವೇತನ ವ್ಯತ್ಯಾಸವಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ 15ನೇ ಬಜೆಟ್ ನಲ್ಲಿ ವೇತನಕ್ಕೆ 13,000 ಕೋಟಿ ರೂ. ಮೀಸಲಿಟ್ಟಿದ್ದಾರೆ. ಶೇ. 25 ರಷ್ಟು ವೇತನ ಹೆಚ್ಚಳ ಆಗಬಹುದು ಎನ್ನಲಾಗಿದೆ.