ಕಾಂಚಿಪುರಂ: ಪ್ರತಿ ಮನೆಗೆ ಆಪ್ಟಿಕಲ್ ಫೈಬರ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುವುದು ಎಂದು ಮಕ್ಕಳು ನಿಧಿ ಮಯ್ಯುಂ ಪಕ್ಷದ ಮುಖ್ಯಸ್ಥ, ಖ್ಯಾತ ನಟ ಕಮಲ್ ಹಾಸನ್ ಹೇಳಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಕ್ಕಳು ನಿಧಿ ಮಯ್ಯುಂ ಪಕ್ಷದ ಆಡಳಿತ ಮತ್ತು ಆರ್ಥಿಕ ಅಜೆಂಡಾಗಳ ಘೋಷಣಾಪತ್ರ ಹೊರಡಿಸಿದ ಅವರು, ನಿತ್ಯದ ಅಗತ್ಯ ಮನೆ ಕೆಲಸ ಮಾಡುವ ಮಹಿಳೆಯರನ್ನು ಇದುವರೆಗೆ ಗುರುತಿಸಿಲ್ಲ. ಮಹಿಳೆಯರಿಗೆ ಗೌರವಧನ ರೂಪದಲ್ಲಿ ವೇತನ ನೀಡುವ ಯೋಜನೆ ಜಾರಿ ಭರವಸೆ ನೀಡಿದ್ದಾರೆ.
ತಮಿಳುನಾಡು ಉತ್ತರಭಾಗದಲ್ಲಿ ಪ್ರಚಾರ ಆರಂಭಿಸಿದ ಕಮಲ್ ಹಾಸನ್ ಅವರು, ಇದೊಂದು ಮಿನಿ ಪ್ರಣಾಳಿಕೆ ಎಂದು ಹೇಳಿದ್ದು, ಎಐಎಡಿಎಂಕೆ ಮತ್ತು ಡಿಎಂಕೆ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿ ಸ್ಪರ್ಧಿಸಲು ನಮ್ಮ ಪಕ್ಷ ಸಜ್ಜಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿ ಮನೆಗೆ ಆಪ್ಟಿಕಲ್ ಫೈಬರ್ ಕೇಬಲ್ ಮೂಲಕ ವೇಗದ ಇಂಟರ್ನೆಟ್(100 ಎಮ್ಬಿಪಿಎಸ್ ಮತ್ತು ಅದಕ್ಕಿಂತ ಹೆಚ್ಚಿನ) ಕಂಪ್ಯೂಟರ್ ಅನ್ನು ಒದಗಿಸಲಾಗುವುದು. ಭಾರತ್ ನೆಟ್ ಮತ್ತು ತಮಿಳು ನೆಟ್ ಯೋಜನೆಗಳನನ್ಉ ಸಮರ್ಪಕವಾಗಿ ಬಳಸಿಕೊಳ್ಳಲಿದ್ದು, ಇಂಟರ್ನೆಟ್ ಅನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗುವುದು ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.