ಬೆಂಗಳೂರು: ವೇತನ ಶ್ರೇಣಿಯಲ್ಲಿ ಕನಿಷ್ಠ ಶೇಕಡ 6.25 ರಷ್ಟು ಮಾಸಿಕ ವಿಮಾ ಕಂತು ಕಟಾವಣೆಗೆ ಸರ್ಕಾರ ಆದೇಶಿಸಿದ್ದು, ಈ ಕ್ರಮಕ್ಕೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಡ್ಡಾಯ ಜೀವ ವಿಮಾ ನಿಯಮಾವಳಿ ಅನ್ವಯ ಕರ್ನಾಟಕ ಸರ್ಕಾರಿ ಜೀವ ವಿಮೆ ಇಲಾಖೆ(ಕೆಜಿಐಡಿ)ಯಲ್ಲಿ ಜೀವ ವಿಮೆ ಪಡೆದುಕೊಳ್ಳದ 72,754 ಸರ್ಕಾರಿ ಅಧಿಕಾರಿಗಳು ಮತ್ತು ನೌಕರರನ್ನು ಸರ್ಕಾರ ಪತ್ತೆ ಮಾಡಿದೆ. ಅವರ ವೇತನ ಶ್ರೇಣಿಯಲ್ಲಿ ಕನಿಷ್ಠ ಶೇಕಡ 6.25 ರಷ್ಟು ಮಾಸಿಕ ವಿಮಾ ಕಂತು ಕಡಿತಕ್ಕೆ ಆದೇಶ ನೀಡಿದೆ. ಆದರೆ, ಸರ್ಕಾರದ ಕ್ರಮಕ್ಕೆ ನೌಕರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯಕ್ಕೆ ಜೀವ ವಿಮೆ ಕಂತು ಕಡಿತಗೊಳಿಸುವುದು ಬೇಡ, ಏಳನೇ ವೇತನ ಆಯೋಗ ಜಾರಿಯಾದ ನಂತರ ಜೀವವಿಮೆ ಕಂತು ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಕಡ್ಡಾಯ ಜೀವ ವಿಮಾ ನಿಯಮಾವಳಿಯ ನಿಯಮ 8ರಂತೆ 50 ವರ್ಷ ವಯಸ್ಸು ಪೂರ್ಣಗೊಂಡವರನ್ನು ಹೊರತುಪಡಿಸಿ ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಮತ್ತು ನೌಕರ ಅವರು ಹೊಂದಿರುವ ಹುದ್ದೆಯ ವೇತನ ಶ್ರೇಣಿಯ ಸರಾಸರಿ ವೇತನದ ಕನಿಷ್ಠ ಶೇಕಡ 6.25 ರಷ್ಟು ಮಾಸಿಕ ವಿಮಾ ಕಂತಿಗೆ ಕಡ್ಡಾಯವಾಗಿ ಜೀವ ವಿಮೆ ಪಡೆದುಕೊಳ್ಳಬೇಕು.
2024ರ ಮಾರ್ಚ್ 31ರ ಅಂತ್ಯಕ್ಕೆ ಅಂದಾಜು 72,754 ಅಧಿಕಾರಿಗಳು ಮತ್ತು ನೌಕರರು ಜೀವವಿಮೆ ಪಡೆಯದಿರುವುದು ಪತ್ತೆಯಾಗಿದ್ದು, ಇವರಿಂದ ಕನಿಷ್ಠ ಜೀವ ವಿಮಾ ಕಂತನ್ನು ಕಡಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶ ನೀಡಲಾಗಿದೆ.