ಸಂಬಳ ನೀಡದ ಕಾರಣ ಕರ್ತವ್ಯದ ವೇಳೆ ಬ್ಯಾಡ್ಜ್ ಧರಿಸಿ ಪ್ರತಿಭಟನೆ ನಡೆಸಿದ ಮಹಿಳಾ ಕಂಡಕ್ಟರ್ ಅಖಿಲಾ ಎಸ್ ನಾಯರ್ ಅವರ ವರ್ಗಾವಣೆ ಆದೇಶವನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ ಆರ್ ಟಿಸಿ) ಹಿಂಪಡೆದಿದೆ.
ಯಾವುದೇ ವೇತನವಿಲ್ಲದೆ 41ನೇ ದಿನದಿಂದ ಸೇವೆ ಸಲ್ಲಿಸುತ್ತಿರುವುದಾಗಿ ತನ್ನ ಸಮವಸ್ತ್ರದ ಮೇಲೆ ಬಿಳಿ ಹಾಳೆಯ ಮೇಲೆ ಬರೆದುಕೊಂಡು ಅದನ್ನು ಬ್ಯಾಡ್ಜ್ ಆಗಿ ಪಿನ್ ಮಾಡಿ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ವೈಕಂ ಡಿಪೋದಲ್ಲಿ ಕಂಡಕ್ಟರ್ ಆಗಿದ್ದ ಅಖಿಲಾ ಅವರನ್ನು ಪಾಲಾ ಡಿಪೋಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಏತನ್ಮಧ್ಯೆ, ಅಖಿಲಾ ಪ್ರದರ್ಶಿಸಿದ ಬ್ಯಾಡ್ಜ್ ನಲ್ಲಿರುವ ವಿಷಯಗಳು ವಾಸ್ತವಕ್ಕೆ ವಿರುದ್ಧವಾಗಿವೆ ಎಂದು ರಸ್ತೆ ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದರು.
ಅಖಿಲಾ ಅವರು ಜನವರಿ 11 ರಂದು ಪ್ರತಿಭಟನೆ ನಡೆಸಿದ್ದು ಅವರ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಆ ಮೂಲಕ ಅಧಿಕಾರಿಗಳ ಗಮನವನ್ನು ಸೆಳೆದಿದ್ದರು. ಈ ಬಗ್ಗೆ ಕೆಎಸ್‌ಆರ್‌ಟಿಸಿ ತನಿಖೆ ನಡೆಸಿ, ಆಕೆ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಆಕೆಯ ಕ್ರಮ ಕೆಎಸ್‌ಆರ್‌ಟಿಸಿ ಮತ್ತು ಕೇರಳ ಸರ್ಕಾರವನ್ನು ದೂಷಿಸಿದೆ ಎಂದು ವರ್ಗಾವಣೆ ಆದೇಶದಲ್ಲಿ ಆರೋಪಿಸಲಾಗಿತ್ತು. ಇದೀಗ ವರ್ಗಾವಣೆ ರದ್ದುಗೊಂಡಿದೆ.