ಕೊರೊನಾ ದಾಳಿಯಿಂದಾಗಿ ಲಾಕ್ ಡೌನ್ ಹೇರಿಕೆ, ಬಳಿಕ ಸಾವಿರಾರು ನೌಕರರಿಗೆ ಉದ್ಯೋಗ ನಷ್ಟದ ಸಂಕಷ್ಟಕ್ಕೆ ದೇಶ ಸಾಕ್ಷಿಯಾಗಿದೆ. ಇನ್ನು, ಕೆಲಸ ಉಳಿಸಿಕೊಂಡಿರುವವರಿಗೆ ವೇತನದಲ್ಲಿ ಭಾರಿ ಕಡಿತವಾಗಿದೆ.
ತಿಂಗಳ ಕೊನೆಯಲ್ಲಿ ಪೂರ್ಣ ಸಂಬಳ ಕಾಣದೆಯೇ ಹಲವು ತಿಂಗಳುಗಳನ್ನು ಭಾರತೀಯ ಕಂಪನಿಗಳ ನೌಕರರು ದೂಡಿದ್ದಾರೆ. ಸಾಫ್ಟ್ ವೇರ್ ಕ್ಷೇತ್ರದಲ್ಲಿ, ಔಷಧ ತಯಾರಿಕೆ ಕ್ಷೇತ್ರದಲ್ಲಿ, ಸರಕಾರಿ ನೌಕರರಿಗೆ ಮಾತ್ರವೇ ಪೂರ್ಣ ವೇತನದ ಜತೆಗೆ ವಾರ್ಷಿಕ ಏರಿಕೆ ಕೂಡ ಸಿಕ್ಕಿದೆ.
ಸಂಬಳ ಕಡಿಮೆ ಆಗಿದ್ದರೆ, ಇನ್ ಕ್ರಿಮೆಂಟ್ ಸಿಕ್ಕಿಲ್ಲದಿದ್ದರೆ ಚಿಂತೆಬಿಡಿ. 2022ರಲ್ಲಿ ಸರಾಸರಿಯಾಗಿ ಶೇ. 9.4 ರಷ್ಟು ವೇತನ ಏರಿಕೆಯನ್ನು ಭಾರತದ ಉದ್ಯೋಗಿಗಳು ಕಾಣಲಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಸಮಾಧಾನಕರ ಸಂಗತಿ ಹೊರಹಾಕಿದೆ. ಇದಕ್ಕೆ ಕಾರಣ ಆರ್ಥಿಕತೆ ಎಷ್ಟು ನೆಲಕಚ್ಚಿತ್ತೋ, ಅಷ್ಟೇ ಪ್ರಬಲವಾಗಿ ಹಾಗೂ ವೇಗವಾಗಿ ಪುಟಿದೇಳುತ್ತಿರುವ ಲಕ್ಷಣಗಳು ಎನ್ನಲಾಗಿದೆ.
ದೇಶದ 1,350 ಕಂಪನಿಗಳಲ್ಲಿ ಎಯಾನ್ ಹೆಸರಿನ ಕಂಪನಿ ಸಮೀಕ್ಷೆ ನಡೆಸಿದೆ. 2017ರಲ್ಲಿ 9.3% ವೇತನ ಏರಿಕೆ ನಂತರ ಅಷ್ಟು ಪ್ರಮಾಣದಲ್ಲಿ ಹೆಚ್ಚಳ ನಂತರದ ವರ್ಷಗಳಲ್ಲಿ ಸಿಕ್ಕೇ ಇಲ್ಲ. ಮುಂದಿನ ವರ್ಷ ಕನಿಷ್ಠ 8.8% ಅಂತೂ ಗ್ಯಾರೆಂಟಿ ಸ್ಯಾಲರಿ ಹೈಕ್ ಸಿಗಲಿದೆ ಎಂಬ ಆಶಾಭಾವವನ್ನು ಸಮೀಕ್ಷೆಯ ವರದಿ ಮೂಡಿಸಿದೆ.