
ಶಿವಮೊಗ್ಗ: ನಾಲ್ಕು ದಿನಗಳ ಹಿಂದೆ ಹುಟ್ಟಿದ್ದ ಆನೆ ಮರಿ ತಾಯಿಯ ಆರೈಕೆ ಸಿಗದೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆದಿದೆ.
ಸಕ್ರೆಬೈಲು ಆನೆ ಬಿಡಾರದ ಸಾಕಾನೆ ಹೇಮಾವತಿ(10) ನಾಲ್ಕು ದಿನಗಳ ಹಿಂದೆ ಕಾಡಿನಲ್ಲಿ ಗಂಡು ಮರಿಗೆ ಜನ್ಮ ನೀಡಿತ್ತು. ಆದರೆ ಮರಿಯಾನೆ ಈಗ ಸಾವನ್ನಪ್ಪಿದೆ. ಕಾರಣ ತಾಯಿ ಆನೆ ಹೇಮಾವೈ ತನ್ನ ಮರಿಗೆ ಹಾಲುಣಿಸಿ, ಆರೈಕೆ ಮಾಡಿಲ್ಲ. ಇದರಿಂದ ಹಸಿವಿನಿಂದ ಬಳಲಿ ಮರಿಯಾನೆ ಸಾವನ್ನಪ್ಪಿದೆ.
ಹೆಣ್ಣಾನೆಗಳು ಸಾಮಾನ್ಯವಾಗಿ 14 ವರ್ಷದ ಬಳಿಕ ಮರಿಗೆ ಜನ್ಮ ನೀಡುತ್ತವೆ. ಆದರೆ ಸಾಕಾನೆ ಹೇಮಾವತಿ 10 ವರ್ಷಕ್ಕೆ ಮರಿಗೆ ಜನ್ಮ ನೀಡಿದೆ. ಇದರಿಂದ ಆನೆಗೆ ತನ್ನ ಮರಿಗೆ ಆರೈಕೆ ಮಡುವುದು ತಿಳಿದಿಲ್ಲ. ಹಾಲು ಕುಡಿಸಲು ನಿರಾಕರಿಸಿದೆ. ಕಾವಾಡಿಗಳು ತಾಯಿ ಆನೆಯಿಂದ ಮರಿಗೆ ಹಾಲು ಕುಡಿದ್ಸಲು ಯತ್ನಿಸಿದರೂ ಆನೆ ಸರಿಯಾಗಿ ಸ್ಪಂದಿಸಿಲ್ಲ. ಆನೆ ಕ್ಯಾಂಪ್ ನ ವೈದ್ಯರು, ಸಿಬ್ಬಂದಿಗಳು ಆನೆ ಹಾಲು ಬಾಟಲಿಯಲ್ಲಿ ಮರಿ ಆನೆಗೆ ಕುಡಿಸಲು ಯತ್ನಿಸಿದರೂ ಮರಿಯಾನೆ ಉಳಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.
ವನ್ಯಜೀವಿ ವಿಭಾಗದ ಡಿಎಫ್ ಒ ಹೇಳುವ ಪ್ರಕಾರ, ಹೇಮಾವತಿ ಆನೆ ತನ್ನ ಮರಿಗೆ ಹೇಗೆ ಆರೈಕೆ ಮಡಬೇಕು ಎಂಬುದು ತಿಳಿದಿರಲಿಲ್ಲ. ನಾಲ್ಕು ದಿನದ ಮರಿಯಾನೆಗೆ ತಾಯಿ ಆನೆಯಿಂದ ಸಿಗಬೇಕಾದ ಆರೈಕೆ ಸಿಕ್ಕಿಲ್ಲ. ಇದರಿಂದ ಆನೆ ಮರಿ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ಮರಿಯಾನೆ ಹೊಟ್ಟೆ ಖಾಲಿ ಇತ್ತು. ಹಸಿವಿನಿಂದ ಬಳಲಿ ಮರಿಯಾನೆ ಸಾವನ್ನಪ್ಪಿದೆ ಎಂದಿದ್ದಾರೆ.