ಬೆಂಗಳೂರು: ಸಕಾಲ ಯೋಜನೆಗೆ ಇನ್ನಷ್ಟು ಸೇವೆಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಶುಕ್ರವಾರ ಸಕಾಲ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಸಕಾಲ ಯೋಜನೆಯಡಿ 1,115 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ನೀಡಲಾಗುತ್ತಿದೆ. ಇನ್ನಷ್ಟು ಹೊಸ ಸೇವೆಗಳನ್ನು ಸೇರ್ಪಡೆ ಮಾಡುವ ಚಿಂತನೆ ಇದೆ ಎಂದು ಹೇಳಿದ್ದಾರೆ.
11 ವರ್ಷಗಳಿಂದ ಸಕಾಲ ಸೇವೆ ನೀಡುತ್ತಿದ್ದರೂ ಅನೇಕರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಸಕಾಲ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಸಕಾಲ ಯೋಜನೆ ಅಡಿ ಅರ್ಜಿ ಸಲ್ಲಿಸಿದವರಿಗೆ ಸೇವೆ ನೀಡಲು ವಿಳಂಬ ಧೋರಣೆ ತೋರಬಾರದು. ಜನರ ಮನೆ ಬಾಗಿಲಿಗೆ ಸೇವೆ ತಲುಪಿಸಲು ಸಕಾಲ ಯೋಜನೆ ಆರಂಭಿಸಿದ್ದು, ಜನಪರ ಸೇವೆ ನೀಡುವ ಅಧಿಕಾರಿಗಳು ಸಾರ್ವಜನಿಕರ ಅರ್ಜಿ ವಿಲೇವಾರಿಗೆ ತಡ ಮಾಡುವುದು ಸರಿಯಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಸಕಲ ಯೋಜನೆ ಮಾದರಿ ಹಾಗೂ ಯಶಸ್ವಿ ಯೋಜನೆಯಾಗಿದ್ದು, ಬೇರೆ ರಾಜ್ಯಗಳು ಕೂಡ ಇದನ್ನು ಅನುಸರಿಸುತ್ತಿವೆ. ಉತ್ತಮ ಸೇವೆ ನೀಡಬೇಕೆಂದು ಸಿಎಂ ಆದೇಶವೂ ಇದೆ. ಅಧಿಕಾರಿಗಳು ಸರಿಯಾಗಿ ಸೇವೆ ನೀಡುವ ಮೂಲಕ ಜನಪರ ಮತ್ತು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸಹಕಾರ ನೀಡಬೇಕು. ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಹೇಳಿದ್ದಾರೆ.