ಬೀದರ್: ಕೇಂದ್ರ ಸರ್ಕಾರ ಬೀದರ್ ಜಿಲ್ಲೆಗೆ ಸೈನಿಕ ಶಾಲೆ ಮಂಜೂರು ಮಾಡಿದೆ. ವಿಜಯಪುರ, ಕೊಡಗು ಬಳಿಕ ರಾಜ್ಯದ ಮೂರನೇ ಸೈನಿಕ ಶಾಲೆ ಬೀದರ್ ಜಿಲ್ಲೆಯಲ್ಲಿ ಆರಂಭವಾಗಲಿದೆ.
ಕಲ್ಯಾಣ ಕರ್ನಾಟಕ ಉತ್ಸವ ದಿನದಂದೇ ಕೇಂದ್ರ ಸರ್ಕಾರದ ಸೈನಿಕ ಶಾಲೆ ಮಂಜೂರು ಮಾಡಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. ದೇಶದ 23 ನಗರಗಳಲ್ಲಿ ಸೈನಿಕ ಶಾಲೆ ಆರಂಭವಾಗಲಿದೆ. ಬೀದರ್ ಗೂ ಸೈನಿಕ ಶಾಲೆ ಮಂಜೂರು ಮಾಡಲಾಗಿದೆ.
ಸಾರ್ವಜನಿಕ ಖಾಸಗಿ ಸಹ ಭಾಗಿತ್ವದಲ್ಲಿ ಬೀದರ್ ನಗರದ ಹೆಚ್.ಕೆ.ಇ. ಸೊಸೈಟಿ ಅಡಿಯಲ್ಲಿ ನಡೆಯುತ್ತಿರುವ ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಪಬ್ಲಿಕ್ ಶಾಲೆಯ ಆವರಣದಲ್ಲಿ ಸೈನಿಕ ಶಾಲೆ ನಿರ್ಮಿಸಲಾಗುವುದು. 8 ಎಕರೆ ಪ್ರದೇಶದಲ್ಲಿ ಸೈನಿಕ ಶಾಲೆ ನಿರ್ಮಿಸಲಿದ್ದು, ಹಾಸ್ಟೆಲ್ ಮತ್ತು ಇತರ ಮೂಲಸೌಕರ್ಯಕ್ಕೆ 24 ಎಕರೆ ಜಮೀನು ಬಳಸಿಕೊಳ್ಳಲಾಗುವುದು. ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಿ ಮುಂದಿನ ವರ್ಷದಿಂದ ತರಗತಿ ಆರಂಭಿಸಲಾಗುವುದು ಎಂದು ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಸೈನಿಕ ಶಾಲೆ ಆರಂಭವಾಗುವುದರಿಂದ ಈ ಭಾಗದ ಮಕ್ಕಳು ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಭಾರತೀಯ ನೌಕಾ ಅಕಾಡೆಮಿಗಳಂತಹ ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.