ಚೆನ್ನೈ: ಎಐಎಡಿಎಂಕೆಯ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆಗೆ ಕೆಲ ಕಿಡಿಗೇಡಿಗಳು ಕೇಸರಿ ಶಾಲು ಹಾಕಿರುವ ದೃಶ್ಯ ಚೆನ್ನೈನಲ್ಲಿ ಕಂಡುಬಂದಿದೆ. ಇಲ್ಲಿನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಬಳಿ ಇರುವ ಪ್ರತಿಮೆಗೆ ಈ ರೀತಿ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ ತಕ್ಷಣ ಪೊಲೀಸರು ಪ್ರತಿಮೆಗೆ ಹಾಕಿದ್ದ ಶಾಲು ತೆಗೆದಿದ್ದಾರೆ. ಪ್ರತಿಮೆಗೆ ಶಾಲು ಹಾಕಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆ ತಿರುವಳ್ಳುವರ್, ಅಣ್ಣಾ, ಪೆರಿಯಾರ್ ಮತ್ತು ಅಂಬೇಡ್ಕರ್ ಪ್ರತಿಮೆಗಳಿಗೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇಂತಹ ಘಟನೆಗಳು ಮರುಕಳಿಸುತ್ತಿದ್ದು ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಸ್ಥಳದಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಪ್ರತಿಮೆಯನ್ನು 2001 ರಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಉದ್ಘಾಟಿಸಿದ್ದರು. 2019 ರಲ್ಲಿ ಜಯಲಲಿತಾ ಅವರ ನಿಧನದ ನಂತರ ಅವರ ಪ್ರತಿಮೆಯನ್ನು ಎಂಜಿಆರ್ ಅವರ ಪಕ್ಕದಲ್ಲಿ ಇರಿಸಲಾಯಿತು. ಇವರ ಅಭಿಮಾನಿಗಳು ಎರಡೂ ಪ್ರತಿಮೆಗಳಿಗೆ ಗೌರವ ಸಲ್ಲಿಸುತ್ತಾರೆ.