ನಟಿ ಸ್ವರಾ ಭಾಸ್ಕರ್ ಇತ್ತೀಚೆಗಷ್ಟೇ ಸಮಾಜವಾದಿ ಪಕ್ಷದ ಮುಖಂಡ ಫಹಾದ್ ಅಹಮದ್ ಅವರನ್ನು ವಿವಾಹವಾಗಿದ್ದಾರೆ. ಅವರಿಬ್ಬರು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆದರೆ ಇಸ್ಲಾಂ ಧರ್ಮ ಒಪ್ಪದೆ ಮದುವೆ ಆಗಿರುವುದರಿಂದ ಇದು ಮಾನ್ಯ ಆಗುವುದಿಲ್ಲ ಎಂದು ಮುಸ್ಲಿಂ ಧರ್ಮಗುರುವೊಬ್ಬರು ಹೇಳಿದ್ದರು.
ಇದರ ಮಧ್ಯೆ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರ ವಿವಾಹ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ, ಕೆಲ ದಿನಗಳ ಹಿಂದೆ ನಡೆದ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ನಿಮಗೂ ಫ್ರಿಡ್ಜ್ ಗತಿ ಬರಬಹುದು ಎಂದು ಸ್ವರಾ ಭಾಸ್ಕರ್ ಗೆ ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿರುವ ಸಾಧ್ವಿ ಪ್ರಾಚಿ, ಈ ಮೊದಲಿನಿಂದಲೂ ಸ್ವರಾ ಭಾಸ್ಕರ್ ಹಿಂದೂ ಧರ್ಮವನ್ನು ವಿರೋಧಿಸಿಕೊಂಡು ಬಂದಿದ್ದು, ಅವರು ಅನ್ಯ ಧರ್ಮದವರನ್ನು ಮದುವೆಯಾಗಿದ್ದು ನನಗೆ ಅಚ್ಚರಿ ತಂದಿಲ್ಲ. ಆದರೆ ಶ್ರದ್ಧಾ ವಾಲ್ಕರ್ ಗೆ ಬಂದ ಗತಿ ಆಕೆಗೆ ಬರಬಹುದು. ಹಾಗಾಗಿ ಎಚ್ಚರದಿಂದ ಇರಲಿ ಎಂದಿದ್ದಾರೆ.
ಶ್ರದ್ಧಾ ವಾಲ್ಕರ್ ಎಂಬ ಯುವತಿಯೊಂದಿಗೆ ಲಿವಿಂಗ್ ಸಂಬಂಧದಲ್ಲಿದ್ದ ಅಫ್ತಾಬ್ ಪೂನಾವಾಲ ಎಂಬಾತ ಬಳಿಕ ಆಕೆಯನ್ನು ಕೊಲೆಗೈದು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟಿದ್ದ ನಂತರ ಅವುಗಳನ್ನು ವಿವಿಧ ಪ್ರದೇಶಗಳಲ್ಲಿ ಎಸೆದಿದ್ದ. ಈ ಹಿನ್ನಲೆಯಲ್ಲಿ ಸಾಧ್ವಿ ಪ್ರಾಚಿ, ಸ್ವರಾ ಭಾಸ್ಕರ್ ಗೆ ಈ ಎಚ್ಚರಿಕೆ ನೀಡಿದ್ದಾರೆ.