ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಖುಷ್ಬು ಸುಂದರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ಅವರನ್ನ ಪಕ್ಷದಿಂದ ಉಚ್ಛಾಟಿಸಲಾಗಿದೆ.
ತಮಿಳುನಾಡು ಪೊಲೀಸರು ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿಯನ್ನು ಬಂಧಿಸಿದ್ದು ಐಪಿಸಿಯ ಸೆಕ್ಷನ್ 153, 294 (ಬಿ), 504, 505 (1) (ಬಿ) ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಡಿಎಂಕೆ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಹೇಳಿಕೆಯೊಂದರಲ್ಲಿ ಕೃಷ್ಣಮೂರ್ತಿ ಅವರನ್ನು ಉಚ್ಚಾಟಿಸುವುದಾಗಿ ಘೋಷಿಸಿದ್ದಾರೆ.
‘ಪಕ್ಷದ ಶಿಸ್ತು ಉಲ್ಲಂಘಿಸಿ ಅಪಖ್ಯಾತಿ ತಂದಿರುವ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲ ಹುದ್ದೆಗಳಿಂದ ವಜಾ ಮಾಡಲಾಗುತ್ತಿದೆ’ ಎಂದಿದ್ದಾರೆ.
ತಮಿಳುನಾಡು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಬಳಸಿದ್ದಕ್ಕಾಗಿ ಅಮಾನತುಗೊಂಡಿದ್ದ ಕೃಷ್ಣಮೂರ್ತಿ ಮತ್ತೊಮ್ಮೆ ಆಕ್ಷೇಪಾರ್ಹ ಭಾಷೆ ಬಳಸಿ ಅವರ ವಿರುದ್ಧ ವಿವಾದವನ್ನು ಹುಟ್ಟುಹಾಕಿದ್ದರು. ಡಿಎಂಕೆ ನಾಯಕ ವಿ ಸೆಂಥಿಲ್ ಬಾಲಾಜಿ ಅವರ ಖಾತೆಗಳನ್ನು ಇತರ ಇಬ್ಬರು ಸಚಿವರಿಗೆ ವರ್ಗಾಯಿಸಲು ನಿರಾಕರಿಸಿದ ಆರೋಪದ ಮೇಲೆ ರಾಜ್ಯಪಾಲರನ್ನು ಟೀಕಿಸುವ ಸಂದರ್ಭದಲ್ಲಿ ಅವರು ಕೆಲವು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದರು.
ಜೊತೆಗೆ ಖುಷ್ಬೂ ಸುಂದರ್ ಅವರನ್ನು ಹಳೆ ಪಾತ್ರೆ ಎಂದು ಟೀಕಿಸಿದರು. ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿಎಂಕೆಯ ಸೆಂಥಿಲ್ ಬಾಲಾಜಿಯನ್ನು ಬಂಧಿಸಿರುವ ಕುರಿತು ತಮಿಳುನಾಡಿನ ಮಾಜಿ ಮೀನುಗಾರಿಕಾ ಸಚಿವ ಜಯಕುಮಾರ್ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಈ ವರ್ಷದ ಜನವರಿಯಲ್ಲಿ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಆರೋಪದ ಮೇಲೆ ಕೃಷ್ಣಮೂರ್ತಿ ಅವರನ್ನು ಪಕ್ಷದ ಹುದ್ದೆಗಳಿಂದ ವಜಾಗೊಳಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯ ನಡುವೆ ಡಿಎಂಕೆ ಅವರನ್ನು ಅಮಾನತುಗೊಳಿಸಿತು. ಆದಾಗ್ಯೂ ಸುಮಾರು ಐದು ತಿಂಗಳ ನಂತರ ಅವರು ತಮ್ಮ ಟೀಕೆಗಳಿಗಾಗಿ ಕ್ಷಮೆಯಾಚಿಸಿದಾಗ ಅವರ ಅಮಾನತು ರದ್ದುಗೊಳಿಸಲಾಯಿತು. ಕೃಷ್ಣಮೂರ್ತಿ ವಿರುದ್ಧ ಖುಷ್ಬು ಸುಂದರ್ ಕಿಡಿಕಾರಿದ್ದಾರೆ.