ನವದೆಹಲಿ: ಕಳೆದ ವರ್ಷ ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಅವರು ಸಚಿನ್ ಮೀನಾ ಅವರೊಂದಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿದೆ.
ಸೀಮಾ ಹೈದರ್ ಅವರು ಶೀಘ್ರದಲ್ಲೇ ತಾಯಿಯಾಗಲಿದ್ದಾರೆ ಹಾಗೂ ಸಚಿನ್ ಅವರ ತಂದೆ ಸೀಮಾ ಅಂಗೈಯನ್ನು ನೋಡಿ ಗಂಡು ಮಗುವಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಸೀಮಾ ಹೈದರ್ 2019 ರಲ್ಲಿ ಆನ್ಲೈನ್ ಗೇಮ್ ಪಬ್ಜಿಯಲ್ಲಿ ಸಚಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ನಂತರ ಸೀಮಾ ಸಚಿನ್ ನಡುವೆ ಪ್ರೀತಿ ಚಿಗುರಿ ಕಳೆದ ವರ್ಷ ಮೇ ತಿಂಗಳಲ್ಲಿ ಸೀಮಾ ಭಾರತಕ್ಕೆ ಬಂದಿದ್ದರು.
ಸೀಮಾ ಪಾಕಿಸ್ತಾನದ ಸಿಂಧ್ ಪ್ರಾಂತ್ಯದವರಾಗಿದ್ದು, ಪಾಕಿಸ್ತಾನಿ ಪ್ರಜೆ ಗುಲಾಮ್ ಹೈದರ್ ಅವರನ್ನು ವಿವಾಹವಾಗಿದ್ದರು. ಗುಲಾಮ್ 2019 ರಲ್ಲಿ ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳುವವರೆಗೂ ಅವರು ಕರಾಚಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಸೀಮಾ ಹೈದರ್ ಗೆ ಇದು ಎರಡನೇ ಮದುವೆಯಾಗಿದ್ದು, ಅವರಿಗೆ ನಾಲ್ಕು ಮಕ್ಕಳು ಇದ್ದಾರೆ. ಹಿರಿಯವನಿಗೆ ಎಂಟು ವರ್ಷ ಆಗಿದೆ.
ಕಳೆದ ವರ್ಷ ಜುಲೈನಲ್ಲಿ ಉತ್ತರ ಪ್ರದೇಶ ಪೊಲೀಸರು ಸೀಮಾ ಮತ್ತು ಸಚಿನ್ ಅವರನ್ನು ಪಾಕಿಸ್ತಾನದ ಗೂಢಚಾರರಾಗಿರಬಹುದು ಎಂಬ ಅನುಮಾನದ ಮೇಲೆ ಬಂಧಿಸಿದ್ದರು. ಆದರೆ ಪ್ರಯಾಣ ನಿರ್ಬಂಧಗಳ ಷರತ್ತಿನ ಮೇಲೆ ಅವರನ್ನು ನಂತರ ಬಿಡುಗಡೆ ಮಾಡಲಾಯಿತು.