ನವದೆಹಲಿ: ರಾಜಸ್ಥಾನ ಕಾಂಗ್ರೆಸ್ ನಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿರುವ ಬಗ್ಗೆ ಯುವ ನಾಯಕ ಸಚಿನ್ ಪೈಲಟ್ ಇಂದು ನವದೆಹಲಿಯಲ್ಲಿ ಎೈಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಸಚಿನ್ ಪೈಲಟ್ ಮುಖ್ಯಮಂತ್ರಿ ಆಗಲು ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಬಣದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಚಿನ್ ಪೈಲಟ್ ಇಂದು ಸೋನಿಯಾಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ಇನ್ನು ಪಕ್ಷದ ಅಂತರಿಕ ವಿಚಾರ ಕುರಿತು ಹೇಳಿಕೆ ನೀಡುವ ನಾಯಕರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದೆ. ರಾಜಸ್ಥಾನ ಸಿಎಂ ಸ್ಥಾನದ ವಿಚಾರದಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಶೋಕ್ ಗೆಹ್ಲೊಟ್ ಅವರನ್ನು ನೇಮಿಸಿ ಸಚಿನ್ ಪೈಲಟ್ ಗೆ ರಾಜಸ್ಥಾನ ಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಚಿಂತನೆ ಇತ್ತು. ಆದರೆ, ಅಶೋಕ್ ಗೆಹ್ಲೊಟ್ ಎರಡೂ ಹುದ್ದೆಗಳಲ್ಲಿ ಮುಂದುವರೆಯುವ ಅಪೇಕ್ಷೆ ಹೊಂದಿದ್ದರು. ಬೆಂಬಲಿಗ ಶಾಸಕರ ಮೂಲಕ ಹೈಡ್ರಾಮಾ ನಡೆಸಿದ್ದರು. ಕೊನೆಗೆ ಎಐಸಿಸಿ ಅಧ್ಯಕ್ಷ ಸ್ಥಾನ ಒಪ್ಪದೇ ಮುಖ್ಯಮಂತ್ರಿ ಆಗಿ ಮುಂದುವರೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಅಂತರಿಕ ನಿರ್ಧಾರದಂತೆ ಸಚಿನ್ ಪೈಲಟ್ ಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಅಭಿಪ್ರಾಯವಿದ್ದು, ಇದು ರಾಜಸ್ಥಾನದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಂದು ಸಚಿನ್ ಪೈಲಟ್ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ಇದಕ್ಕಿಂತ ಮೊದಲು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಗೆಹ್ಲೊಟ್ ರಾಜಸ್ಥಾನ ಬೆಳವಣಿಗೆಗಳ ಬಗ್ಗೆ ಕ್ಷಮೆಯಾಚಿಸಿದ್ದಾರೆ ಎನ್ನಲಾಗಿದೆ.
ರಾಜಸ್ಥಾನ ಮುಖ್ಯಮಂತ್ರಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದೆರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಬಹುತೇಕ ಸಚಿನ್ ಪೈಲಟ್ ಅವರನ್ನು ಸಿಎಂ ಮಾಡಲು ಹೈಕಮಾಂಡ್ ಒಲವು ಹೊಂದಿದ್ದು, ಒಂದೆರಡು ದಿನಗಳಲ್ಲಿ ಸೋನಿಯಾ ಗಾಂಧಿ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.