ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಮಕರ ಜ್ಯೋತಿ ದರ್ಶನ ಉತ್ಸವಕ್ಕೆ ತೆರೆಯಲಾಗಿದೆ. ಡಿಸೆಂಬರ್ 30ರಂದು ಸಂಜೆ ತಂತ್ರಿ ಕಂಠಾರ್ ಮಹೇಶ್ ಮೋಹನರ್ ಉಪಸ್ಥಿತಿಯಲ್ಲಿ ಪ್ರಧಾನ ಅರ್ಚಕ ಪಿ.ಎನ್. ಮಹೇಶ್ ದೇಗುಲದ ಬಾಗಿಲು ತೆರೆದಿದ್ದಾರೆ.
ಜನವರಿ 15ರಂದು ಮಕರ ಜ್ಯೋತಿ ದರ್ಶನ ಆಗಲಿದೆ. ಶನಿವಾರ ಮಧ್ಯಾಹ್ನದ ನಂತರ ಪಂಪಾದಿಂದ ಯಾತ್ರಾರ್ಥಿಗಳ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ಪ್ರಧಾನ ಅರ್ಚಕ ಮಹೇಶ್ 18 ಮೆಟ್ಟಿಲುಗಳನ್ನು ಇಳಿದು ಹೋಮಕುಂಡಕ್ಕೆ ಅಗ್ನಿ ಸ್ಪರ್ಶ ಮಾಡುವುದರೊಂದಿಗೆ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸ್ವಾಮಿಯನ್ನು ಯೋಗ ನಿದ್ರೆಯಿಂದ ಎಬ್ಬಿಸುವುದರೊಂದಿಗೆ ಮಕರ ಜ್ಯೋತಿ ಉತ್ಸವಕ್ಕೆ ಚಾಲನೆ ದೊರೆತಿದೆ. ಮಂಡಲ ಉತ್ಸವ ಅವಧಿಯ ಆರಂಭಿಕ ಹಂತದಲ್ಲಿನ ದರ್ಶನದ ಅವ್ಯವಸ್ಥೆಗಳನ್ನು ಸರಿಪಡಿಸಿ ಭಕ್ತರಿಗೆ ಈ ಬಾರಿ ಸುಗಮವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಲು ದೇವಸ್ವಂ ಮಂಡಳಿ ಮತ್ತು ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ.