
ಪ್ರಸಿದ್ಧ ಯಾತ್ರಾ ಸ್ಥಳ ಕೇರಳದ ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಮಾರ್ಚ್ 14 ರಿಂದ ಅಯ್ಯಪ್ಪ ಸ್ವಾಮಿಯ ನೇರ ದರ್ಶನಕ್ಕೆ ಹೊಸ ವ್ಯವಸ್ಥೆ ಕಲ್ಪಿಸಲಾಗಿದೆ. ಕನಿಷ್ಠ 30 ಸೆಕೆಂಡ್ ದರ್ಶನಕ್ಕೆ ಭಕ್ತರಿಗೆ ಅವಕಾಶ ಇರುತ್ತದೆ.
ಮಾರ್ಚ್ 14ರಂದು ಮೀನ ಮಾಸ ಪೂಜೆಗೆ ದೇವಾಲಯ ತೆರೆದ ನಂತರ ಶಬರಿಮಲೆ ಸನ್ನಿಧಾನದಲ್ಲಿ 18 ಮೆಟ್ಟಿಲೇರಿದ ತಕ್ಷಣ ನೇರವಾಗಿ ಅಯ್ಯಪ್ಪ ಸ್ವಾಮಿ ದರ್ಶನ ವ್ಯವಸ್ಥೆ ಜಾರಿಗೆ ಬರಲಿದೆ.
18 ಮೆಟ್ಟಿಲುಗಳನ್ನು ಏರಿ ಎಡಕ್ಕೆ ತಿರುಗಿ ಫ್ಲೈಓವರ್ ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ವ್ಯವಸ್ಥೆ ಕೈಬಿಟ್ಟು ಎರಡೂ ಬದಿಗಳಲ್ಲಿ ಬರುವ ಅಯ್ಯಪ್ಪ ಭಕ್ತರನ್ನು ನೇರ ಅಯ್ಯಪ್ಪ ದರ್ಶನಕ್ಕೆ ಬಿಡಲಾಗುವುದು. ಎಲ್ಲಾ ಭಕ್ತರಿಗೆ ಕನಿಷ್ಠ 30 ಸೆಕೆಂಡ್ ಕಾಲ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಈ ಮೊದಲು ಫ್ಲೈ ಓವರ್ ಮೂಲಕ ಗರ್ಭಗುಡಿ ಮುಂಭಾಗ ತಲುಪಿದಾಗ ಕೇವಲ ಎರಡು ಅಥವಾ ಮೂರು ಸೆಕೆಂಡ್ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು. ಎರಡೂ ಬದಿಯಲ್ಲಿ ಬರುವ ಸಾಲುಗಳನ್ನು ಬೇರ್ಪಡಿಸಲು ಉದ್ದನೆಯ ಕಾಣಿಕೆ ಡಬ್ಬ ಸ್ಥಾಪಿಸಲಿದ್ದು, ಎಡಭಾಗದಿಂದ ಬರುವವರು ಸ್ವಲ್ಪ ಎತ್ತರದ ಫ್ಲಾಟ್ ಫಾರ್ಮ್ ತಲುಪಿ ಅಲ್ಲಿಂದ ಎಡಕ್ಕೆ ತಿರುಗಿದರೆ ಅಯ್ಯಪ್ಪನ ದರ್ಶನ ಪಡೆದುಕೊಳ್ಳಬಹುದು. ಬಲ ಭಾಗದಿಂದ ಬರುವವರು ನೆಲಮಟ್ಟದ ಪ್ರದೇಶ ತಲುಪಿ ಎಡಕ್ಕೆ ತಿರುಗುವ ಕಾರಣ ಎರಡು ಸಾಲುಗಳಲ್ಲಿನ ಭಕ್ತರು ಪರಸ್ಪರ ಸೇರುವುದಿಲ್ಲ. ಹೀಗಾಗಿ ಭಕ್ತರ ದಟ್ಟಣೆ ಉಂಟಾಗುವುದಿಲ್ಲ.
ಪ್ರಸ್ತುತ ಭಕ್ತರಿಗೆ ದೇವಾಲಯದ ಮುಂದೆ ಮೂರು ಸಾಲುಗಳಲ್ಲಿ ಹಾದು ಹೋಗಲು ಅವಕಾಶ ನೀಡುತ್ತಿದ್ದು, ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಫ್ಲೈ ಓವರ್ ಹತ್ತದೇ ನೇರ ದರ್ಶನ ಹೊಸ ವ್ಯವಸ್ಥೆಯನ್ನು ಹೈಕೋರ್ಟ್ ಅನುಮೋದಿಸಿದೆ. ಹೈಕೋರ್ಟ್ ನೇಮಕ ಮಾಡಿದ್ದ ತಜ್ಞರ ತಂಡ ಹೊಸ ವ್ಯವಸ್ಥೆಯ ಅಂತಿಮ ವಿಶ್ಲೇಷಣೆ ನಡೆಸಿದ್ದಾರೆ. ದೇವಾಲಯದ ತಾಂತ್ರಿಕ ರಚನೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದ ಕಾರಣ ಹೊಸ ವ್ಯವಸ್ಥೆಗೆ ತಂತ್ರಿಗಳ ಅನುಮತಿ ಕೂಡ ದೊರೆತಿದೆ.