ತಿರುವನಂತಪುರಂ: ಶಬರಿಮಲೆಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇರಳ ಸರ್ಕಾರ ಹಸಿರು ನಿಶಾನೆ ತೋರಿದೆ.
ಮುಂದಿನ ಮಂಡಲೋತ್ಸವದ ವೇಳೆಗೆ ರೋಪ್ ವೇ ಸಿದ್ಧವಾಗಲಿದೆ. ಪಂಪಾದಿಂದ ಸನ್ನಿಧಾನದವರೆಗೆ ಮುಂದಿನ ವರ್ಷದೊಳಗೆ ರೋಪ್ ವೇ ನಿರ್ಮಿಸಲಾಗುವುದು ಎಂದು ಕೇರಳ ದೇವಸ್ವಂ ಸಚಿವ ವಿ.ವಿ. ವಾಸವನ್ ಹೇಳಿದ್ದಾರೆ.
ವೃದ್ಧ ಯಾತ್ರಿಕರು, ಅನಾರೋಗ್ಯ ಪೀಡಿತರು, ಸರಕುಗಳ ಸಾಗಾಣಿಕೆಗೆ ಅನುಕೂಲವಾಗುವಂತೆ ಕೇಬಲ್ ಕಾರ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕೇರಳ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಶಬರಿಮಲೆ ರೋಪ್ ವೇ 2.7 ಕಿಲೋಮೀಟರ್ ಇರಲಿದೆ. ಪಂಪಾದಿಂದ ಸನ್ನಿಧಾನದವರೆಗೆ ಕೇಬಲ್ ಕಾರ್ ಸಂಚಾರವಿರಲಿದ್ದು, ಇದಕ್ಕೆ ಸುಮಾರು 250 ಕೋಟಿ ರೂ. ವೆಚ್ಚವಾಗುವ ಅಂದಾಜಿದೆ.
ರೋಪ್ ವೇ ನಿರ್ಮಾಣದಿಂದ ಶಬರಿಮಲೆ ಅರಣ್ಯ ಪ್ರದೇಶದಲ್ಲಿ ವಾಯುಮಾಲಿನ್ಯ ಕಡಿಮೆಯಾಗಲಿದೆ. ಪ್ರಸ್ತುತ ಡೀಸೆಲ್ ಚಾಲಿತ ಟ್ರ್ಯಾಕ್ಟರ್ ಗಳ ಬಳಕೆ ಹೆಚ್ಚಾಗಿದ್ದು, ರೋಪ್ ವೇ ನಿರ್ಮಾಣದಿಂದ ಟ್ರ್ಯಾಕ್ಟರ್ ಗಳ ಬಳಕೆಗೆ ಬ್ರೇಕ್ ಬೀಳಲಿದೆ. ಪೆರಿಯಾರ್ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಮಾಲಿನ್ಯ ನಿಯಂತ್ರಣವಾಗಲಿದೆ ಎಂದು ಹೇಳಲಾಗಿದೆ.