ತಿರುವನಂತಪುರಂ: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಹಾಗೂ ಮಕರ ಮಹೋತ್ಸವ ಋತುವಿನಲ್ಲಿ ಇನ್ನು ದರ್ಶನಕ್ಕೆ ಸ್ಪಾಟ್ ಬುಕಿಂಗ್ ಇರುವುದಿಲ್ಲ. ಭಕ್ತರ ಸಂದಣಿ ನಿಯಂತ್ರಿಸುವ ಸಲುವಾಗಿ ಮುಂಗಡ ಬುಕ್ಕಿಂಗ್ ಕಡ್ಡಾಯಗೊಳಿಸಲಾಗಿದೆ.
ಮುಂಗಡ ಬುಕಿಂಗ್ ಮಾಡಿದವರಿಗಷ್ಟೇ ಶಬರಿಮಲೆ ಪ್ರವೇಶಕ್ಕೆ ಅವಕಾಶವಿರುತ್ತದೆ. ಇನ್ನು ಮುಂದೆ ಆನ್ಲೈನ್ ಬುಕಿಂಗ್ ಗೆ ಮಾತ್ರ ಅವಕಾಶ ನೀಡಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಈ ಬಗ್ಗೆ ತೀರ್ಮಾನ ಕೈಗೊಂಡಿದೆ. ಉತ್ಸವದ ಸಂದರ್ಭಗಳಲ್ಲಿ ಪ್ರತಿದಿನ 80 ಸಾವಿರ ಬುಕ್ಕಿಂಗ್ ಗೆ ಅವಕಾಶ ಇರುತ್ತದೆ.
ಅಯ್ಯಪ್ಪ ಸ್ವಾಮಿ ಭಕ್ತರ ಸಂಚಾರ ದಟ್ಟಣೆ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ಋತುವಿನಲ್ಲಿ ಶಬರಿಮಲೆಯಲ್ಲಿ ಭಕ್ತರ ಸಂದಣಿ ನಿಯಂತ್ರಿಸಲು ಸಾಧ್ಯವಾಗದೆ ಭಾರಿ ಸಮಸ್ಯೆ ಎದುರಾಗಿತ್ತು. ದೇವಸ್ಥಾನ ಮಂಡಳಿ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದ್ದು, ಸ್ಪಾಟ್ ಬುಕಿಂಗ್ ಮೂಲಕ ಬರುವ ಭಕ್ತರ ಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕಲು ಸಾಧ್ಯವಾಗದಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಳವಾಗಿ ದರ್ಶನದ ಸಮಯವನ್ನು ವಿಸ್ತರಿಸುವ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ ಆನ್ ಲೈನ್ ಮುಂಡ ಬುಕ್ಕಿಂಗ್ ಕಡ್ಡಾಯ ಮಾಡಲಾಗಿದೆ ಎನ್ನಲಾಗಿದೆ.