ತಿರುವನಂತಪುರಂ: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ 18 ಗಂಟೆ ಸರದಿಯಲ್ಲಿ ನಿಂತರೂ ಕೆಲವೊಮ್ಮೆ ದೇವರ ದರ್ಶನ ಸಾಧ್ಯವಾಗುತ್ತಿಲ್ಲ. ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಗರ್ಭಗುಡಿ ಬಳಿ ಹೋದಾಗ ದೇವರ ಮುಖ ನೋಡುವ ಮುನ್ನವೇ ಎಳೆದು ಹೊರಗೆ ಹಾಕಲಾಗುತ್ತಿದೆ ಎಂದು ಭಕ್ತರು ಹೇಳಿಕೊಂಡಿದ್ದಾರೆ.
ಭಕ್ತರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಕೇರಳ ಸಿಎಂ ಹೇಳಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ. ಬಸ್ ಗಳು ನಿಂತ ಜಾಗದಿಂದ ಗಂಟೆಗಟ್ಟಲೆ ಕದಲುತ್ತಿಲ್ಲ. ಭಕ್ತರ ನಿರ್ವಹಣೆಯಲ್ಲಿ ಕೇರಳ ಸರ್ಕಾರ ವಿಫಲವಾಗಿದ್ದು, ಅಯ್ಯಪ್ಪ ಸ್ವಾಮಿ ಭಕ್ತರು ಪರದಾಡುವಂತಾಗಿದೆ.
ಮಕ್ಕಳು, ವೃದ್ಧರು ಕೂಡ ಅರಣ್ಯದಲ್ಲಿ ಮಲಗಿ ನದಿಯಲ್ಲಿ ಸ್ನಾನ ಮಾಡಬೇಕಾದ ಪರಿಸ್ಥಿತಿ ಇದೆ. ಬೆಟ್ಟ ಹತ್ತಿದ ಬಳಿಕ ತಗಡಿನ ಶೆಡ್ ನೊಳಗೆ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಿದೆ. 18 ಮೆಟ್ಟಿಲು ಹತ್ತಿ ದೇವರ ದರ್ಶನ ಮಾಡಲು ಹೋದರೆ ಭದ್ರತಾ ಸಿಬ್ಬಂದಿ ದೇವರನ್ನು ನೋಡಲು ಬಿಡದೆ ಎಳೆದು ಹಾಕುತ್ತಾರೆ ಎಂದು ಭಕ್ತರು ಹೇಳಿದ್ದಾರೆ.
ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಭಾರಿ ಸಂಖ್ಯೆಯ ಭಕ್ತರು ಬರತೊಡಗಿದ್ದಾರೆ. ಆನ್ಲೈನ್ ನಲ್ಲಿ ದರ್ಶನಕ್ಕೆ ಬುಕ್ ಮಾಡಿಕೊಂಡವರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ನಿತ್ಯ ಲಕ್ಷಾಂತರ ಭಕ್ತರಿಗೆ ಅವಕಾಶ ಕಲ್ಪಿಸಿದ್ದರೂ ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿಲ್ಲ. ಹೀಗಾಗಿ ಭಕ್ತರು ಪರದಾಡುವಂತಾಗಿದೆ ಎಂದು ಹೇಳಲಾಗಿದೆ.