ಶಬರಿಮಲೆ: ಪ್ರಸಿದ್ಧ ಧಾರ್ಮಿಕ ಸ್ಥಳ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ‘ಅಯ್ಯನ್’(Ayyan) ಆ್ಯಪ್ ಬಿಡುಗಡೆ ಮಾಡಲಾಗಿದೆ.
ಅರಣ್ಯ ಮಾರ್ಗದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಭಕ್ತರಿಗೆ ದಾರಿ ಸೂಚಕವಾಗಿ ಕೇರಳ ಅರಣ್ಯ ಇಲಾಖೆಯಿಂದ ಆ್ಯಪ್ ಬಿಡುಗಡೆ ಮಾಡಲಾಗಿದೆ. ಕಾಡಿನ ದಾರಿ, ತುರ್ತು ಸೇವೆಗಳ ಬಗ್ಗೆ ಈ ಆ್ಯಪ್ ನಲ್ಲಿ ಮಾಹಿತಿ ಒಳಗೊಂಡಿದ್ದು, ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ನಲ್ಲಿ ಮಾಹಿತಿ ಇದೆ.
ವೈದ್ಯಕೀಯ ನೆರವು, ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಬಗ್ಗೆ ಮಾಹಿತಿ, ಪೆರಿಯಾರ್ ವನ್ಯಜೀವಿ ಅಭಯಾರಣ್ಯ, ಪಂಪಾ, ಶಬರಿಮಲೆ ದೇವಾಲಯ, ಸನ್ನಿಧಾನ, ದರ್ಶನ ಸಮಯ, ಪೂಜೆಗಳ ಬಗ್ಗೆ ಅಪ್ಲಿಕೇಶನ್ ನಲ್ಲಿ ಮಾಹಿತಿ ಇದ್ದು, ತುರ್ತು ಸಂದರ್ಭಕ್ಕೆ ಸಹಾಯವಾಣಿ ಒದಗಿಸಲಾಗಿದೆ.
ಆನ್ಲೈನ್ ಮತ್ತು ಆಫ್ಲೈನ್ ನಲ್ಲಿಯೂ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ. ಗೂಗಲ್ ಪ್ಲೇ ಸ್ಟೋರ್ ನಿಂದ ಮತ್ತು ಪುಲಮೇಡು ಕಾಡಿನ ಮಾರ್ಗದ ಪ್ರವೇಶದಲ್ಲಿ ಇರಿಸಲಾದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.