‘ಜೀವನದಲ್ಲಿ ಏನು ಬೇಕಾದರೂ ಮಾಡಿ ಆದರೆ ಮದುವೆಯಾಗಬೇಡಿ’ ಎಂದು ಮನವಿ ಮಾಡಿಕೊಳ್ಳುತ್ತಾ ಉತ್ತರ ಪ್ರದೇಶದ ಗಾಜಿಯಾಬಾದ್‌ನ 38 ವರ್ಷದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ವರದಿಗಳ ಪ್ರಕಾರ ಬುಲಂದ್‌ಶಹರ್‌ನ ನರಸೈನಾ ಪ್ರದೇಶದ ಜಗಜಿತ್ ಸಿಂಗ್ ರಾಣಾ ಅವರು ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಮತ್ತು ಔಷಧಿ ಪೂರೈಕೆ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಅತ್ತೆಯ ಕಿರುಕುಳದಿಂದ ನೊಂದ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಎರಡು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾನೆ.
ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವ ಕಂಡು ನೆರೆಹೊರೆಯವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ್ದ ಎರಡು ವಿಡಿಯೋಗಳು ಪತ್ತೆಯಾಗಿವೆ.
ಪೊಲೀಸರ ಪ್ರಕಾರ ವಿಡಿಯೋದಲ್ಲಿ ಜಗಜಿತ್ ತನ್ನ ಅತ್ತೆಯಿಂದ ಜೀವ ಭಯವಿದೆ, ತನ್ನನ್ನು ಅವರು ಆತ್ಮಹತ್ಯೆಗೆ ಒತ್ತಾಯಿಸುತ್ತಿದ್ದುದ್ದಾಗಿ ಹೇಳಿದ್ದಾನೆ. ಮೂರು ನಿಮಿಷ ನಾಲ್ಕು ಸೆಕೆಂಡುಗಳ ವೀಡಿಯೊದಲ್ಲಿ ಬುಲಂದ್‌ಶಹರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ತನ್ನ ಅತ್ತೆ ವಾಸವಿರುವುದಾಗಿ ಹೇಳಿದ್ದು ಸಾವಿಗೂ ಮುನ್ನ ಆತ ವಾಟ್ಸಪ್ ನಲ್ಲಿ ಅವರಿಗೆ ವಿಡಿಯೋ ಕಳಿಸಿದ್ದಾನೆ.
“ನನ್ನ ಹೆಂಡತಿ ಮತ್ತು ಅತ್ತೆಯ ಕಿರುಕುಳದಿಂದ ನಾನು ನನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದೇನೆ, ಇದು ಅಸಹನೀಯವಾಗಿದೆ. ತನ್ನ ಹೆಂಡತಿ ಮತ್ತು ಅತ್ತೆ ನೀಡಿದ ಹಿಂಸೆಯನ್ನು ವಿವರಿಸಲು ಸಾಧ್ಯವಿಲ್ಲ” ಎಂದು ವಿಡಿಯೋದಲ್ಲಿ ಹೇಳಿದ್ದಾನೆ.
ಜಗಜಿತ್ ಸಿಂಗ್ ರಾಣಾ ಸಾವಿನ ಮೊದಲು ಅವರಿಗಿದ್ದ ಒತ್ತಡದ ಪ್ರಮಾಣವನ್ನು ಅವರ ವೀಡಿಯೊದಿಂದ ತಿಳಿಯಬಹುದಾಗಿದೆ. ತನ್ನ ಆಸ್ತಿಯಲ್ಲಿ ಯಾರಿಗೂ ಪಾಲು ನೀಡಬಾರದು, ನನ್ನ ಮುಖವನ್ನು ಯಾರಿಗೂ ತೋರಿಸಬಾರದು ಎಂದು ಹೇಳಿದ್ದಾರೆ.
ತನ್ನ ಅಂತಿಮ ಸಂಸ್ಕಾರವನ್ನು ಪೊಲೀಸರು ಮತ್ತು ಆಡಳಿತ ಮಂಡಳಿಯವರು ನಡೆಸಬೇಕು ಮತ್ತು ಯಾರಿಗೂ ಅವರ ಮುಖ ತೋರಿಸಬಾರದು ಎಂದು ವಿಡಿಯೋದಲ್ಲಿ ವಿನಂತಿಸಿದ್ದಾರೆ. ಎರಡನೇ ವೀಡಿಯೋದಲ್ಲಿ ಜಗಜಿತ್ ಸಿಂಗ್ ತನ್ನ ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಳ್ಳುತ್ತಿದ್ದು ‘ಜೀವನದಲ್ಲಿ ನೀವು ಏನು ಬೇಕಾದರೂ ಮಾಡಿ, ಆದರೆ ಎಂದಿಗೂ ಮದುವೆಯಾಗಬೇಡಿ. ಜೈ ಶ್ರೀ ರಾಮ್.” ಎಂದು ಹೇಳಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಜಗಜಿತ್ ಸಿಂಗ್ ರಾಣಾ ಅವರ ಕುಟುಂಬದಿಂದ ದೂರಿಗಾಗಿ ಕಾಯುತ್ತಿದ್ದಾರೆ.