ದಾವಣಗೆರೆ: ಮಾಜಿ ಸಚಿವ, ಬಿಜೆಪಿ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾರೋಗ್ಯ ಹಾಗೂ ವಯಸ್ಸಾದ ಕಾರಣ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ. ನನಗೆ ಟಿಕೆಟ್ ಬೇಡವೆಂದು ವರಿಷ್ಠರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಅನಾರೋಗ್ಯದ ಕಾರಣ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವರಿಷ್ಠರ ಗಮನಕ್ಕೆ ತಂದಿದ್ದು, ಯುವಕರಿಗೆ ಅವಕಾಶ ಕೊಡಿ. ಅವರನ್ನು ಗೆಲ್ಲಿಸುವ ಪ್ರಯತ್ನ ನಾವು ಮಾಡುತ್ತೇವೆ ಎಂದು ವರಿಷ್ಠರಿಗೆ ತಿಳಿಸಿದ್ದೇನೆ ಎಂದರು.
ಯಡಿಯೂರಪ್ಪ ಸ್ವಯಂ ನಿವೃತ್ತಿ ಘೋಷಿಸಿದ್ದು, ಅವರ ನಂತರ ಪಕ್ಷದಲ್ಲಿ ಇರುವ ಹಿರಿಯ ಅಂದರೆ ನಾನೇ. ನಾನು ಕೂಡ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು ರವೀಂದ್ರನಾಥ್ ತಿಳಿಸಿದ್ದಾರೆ. 92 ವರ್ಷದ ಶಾಮನೂರು ಶಿವಶಂಕರಪ್ಪ ಅವರೇ ಸ್ಪರ್ಧಿಸುತ್ತಿದ್ದಾರೆಯಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ ರವೀಂದ್ರನಾಥ್ ದೇವರು ಅವರಿಗೆ ಒಳ್ಳೆಯ ಆರೋಗ್ಯ ಕೊಟ್ಟಿದ್ದಾನೆ. ಶುಗರ್, ಬಿಪಿ ಇಲ್ಲದೆ ಆರೋಗ್ಯ ಕಾಪಾಡಿಕೊಂಡಿದ್ದಾರೆ. ಆದರೆ, ನನ್ನ ಆರೋಗ್ಯ ಸರಿ ಇಲ್ಲ. ಹಾಗಾಗಿ ನಿವೃತ್ತಿ ಘೋಷಿಸುತ್ತೇನೆ. ಸ್ಪರ್ಧೆ ಮಾಡದಿರುವ ಬಗ್ಗೆ ಬೆಂಬಲಿಗರಿಗೂ ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವಂತೆ ರವೀಂದ್ರನಾಥ್ ಅವರಿಗೆ ಬೆಂಬಲಿಗರು ಭಾರಿ ಒತ್ತಡ ಹಾಕಿದ್ದಾರೆ.