
ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದು, ವಾಕ್ಪ್ರಹಾರ ನಡೆಸಿದ್ದಾರೆ.
ಎಸ್.ಟಿ.ಸೋಮಶೇಖರ್ ಬೇಕಾದ್ರೆ ನಮ್ಮ ಜೊತೆ ಇರಲಿ, ಬೇಡವಾದ್ರೆ ಹೋಗಲಿ ಎಂದು ನೇರವಾಗಿ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದರು. ಈಶ್ವರಪ್ಪ ಬೆನ್ನಲ್ಲೇ ಇದೀಗ ಸಿ.ಟಿ.ರವಿ ಕೂಡ ಸೋಮಶೇಖರ್ ವಿರುದ್ಧ ಗರಂ ಆಗಿದ್ದು, ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆ ಅಲ್ಲ ಜೀವನದ ಜೀವಾಳವಾಗಬೇಕು ಎಂದು ಟಾಂಗ್ ನೀಡಿದ್ದಾರೆ.
ಶಾಸಕ ಎಸ್.ಟಿ.ಸೋಮಶೇಖರ್ ಅವರ ಅಸಮಾಧಾನಕ್ಕೆ ಹಲವು ಕಾರಣಗಳಿವೆ. ಇದರ ಬಗ್ಗೆ ಚರ್ಚೆ ಈವಾಗ ಮಾಡುವುದಿಲ್ಲ. ನಿಷ್ಠೆ ಎಂಬುದು ಸನ್ನಿವೇಶದ ಅವಶ್ಯಕತೆ ಅಲ್ಲ ಜೀವನದ ಜೀವಾಳವಾಗಬೇಕು. ಸನ್ನಿವೇಷಕ್ಕೆ ತಕ್ಕಂತೆ ನಿಷ್ಠೆ ಬದಲಾಗುವಂತದ್ದು ಕೆಲವರಿಗೆ ಇರುತ್ತದೆ ಎಂದು ಗುಡುಗಿದ್ದಾರೆ.
ಎಸ್.ಟಿ.ಸೋಮಶೇಖರ್ ಬಗ್ಗೆ ಈಗೇನೂ ಹೇಳಲು ಬಯಸುವುದಿಲ್ಲ ಸಂದರ್ಭ ಬಂದಾಗ ಹೇಳುತ್ತೇನೆ ಎಂದು ತಿಳಿಸಿದ್ದಾರೆ.