ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ವಿರುದ್ಧ ಸ್ವಪಕ್ಷದ ಶಾಸಕರೇ ತಿರುಗಿಬಿದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆಗೆ ಮತ ಹಾಕಬೇಡಿ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಬೆಂಬಲಿಗರ ಸಭೆ ನಡೆಸಿದ ಬಿಜೆಪಿ ರೆಬಲ್ ಶಾಸಕ ಎಸ್.ಟಿ.ಸೋಮಶೇಖರ್, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆಗೆ ಅಲ್ಲಿಯೇ ಗೋಬ್ಯಾಕ್ ಎಂದು ಹೇಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ. ಯಾವುದೇ ಕೆಲಸ ಮಾಡಿಲ್ಲ ಎಂದು ಅಲ್ಲಿ ಬಿಜೆಪಿ ಕಾರ್ಯಕರ್ತರೇ ಶೋಭಾ ಕರಂದ್ಲಾಜೆ ವಿರುದ್ಧ ಗೋಬ್ಯಾಕ್ ಅಭಿಯಾನ ನಡೆಸಿದ್ದಾರೆ. ಹೀಗಿರುವಾಗ ಬೆಂಗಳೂರು ಉತ್ತರಕ್ಕೆ ಯಾಕೆ ಅವರನ್ನು ಸ್ವಾಗತಿಸಬೇಕು? ಎಂದು ಗುಡುಗಿದ್ದಾರೆ.
ಈವರೆಗೂ ಒಂದು ಬಾರಿಯಾದರೂ ಬಿಜೆಪಿ ಅಭ್ಯರ್ಥಿ ಬಂದು ಮಾತನಾಡುತ್ತಾರೆ ಎಂದು ಕಾದಿದ್ದೆ. ಆದರೆ ಅವರು ಬಂದು ಏನೂ ಕೇಳಿಲ್ಲ. ಹಾಗಾಗಿ ಸಭೆ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ. ಕ್ಷೇತ್ರಕ್ಕೆ ಸಹಾಯ ಮಾಡುವವರಿಗೆ ಮತ ಕೊಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಈ ಮೂಲಕ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಬಿಜೆಪಿ ಅಭ್ಯರ್ಥಿ ವಿರುದ್ಧವೇ ಪ್ರಚಾರ ನಡೆಸುವ ಮೂಲಕ ಶೋಭಾ ಕರಂದ್ಲಾಜೆಗೆ ಮತ ಹಕಬೇಡಿ ಎಂದು ಕರೆ ನೀಡುತ್ತಿದ್ದಾರೆ.