ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ 14 ನಿವೇಶನಗಳನ್ನು ವಾಪಾಸ್ ನೀಡಿರುವ ವಿಚಾರವಾಗಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದ್ದು, ಮುಡಾ ನಿವೇಶನ ಪಡೆದಿರುವುದು ಕಾನೂನುಬಾಹಿರವಲ್ಲ. ಕಾನೂನುಬಾಹಿರವಾಗಿದ್ದರೆ ಅಂದು ಬಿಜೆಪಿ ಸರ್ಕಾರವೇ ಇತ್ತು. ಅವತ್ತೇ ಸೈಟ್ ವಜಾ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ರಾಜಕೀಯ ದುರುದ್ದೇಶದಿಂದ ಬಿಜೆಪಿಯವರು ಈ ರೀತಿ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಕಳಂಕವಿಲ್ಲದೇ ಇಷ್ಟು ವರ್ಷ ರಾಜಕಾರಣದಲ್ಲಿರುವವರು. ಹಾಗಾಗಿ ಅವರ ವಿರುದ್ಧ ಬಿಜೆಪಿ ನಾಯಕರೆಲ್ಲ ಸೇರಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ರೀತಿ ಮಾಡುತ್ತಿದ್ದಾರೆ ಎಂದು ಸ್ವಪಕ್ಷದ ವಿರುದ್ಧವೇ ಕಿಡಿಕಾರಿದರು.
ಮುಡಾದಿಂದ 50:50 ನಿವೇಶನ ಹಂಚಿಕೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮಾತ್ರವಾಗಿಲ್ಲ. ಬಿಜೆಪಿ ನಾಯಕರ ಪತ್ನಿಯರೂ ಇದೇ ರೀತಿ ಮುಡಾ ನಿವೇಶನಗಳನ್ನು ಪಡೆದಿದ್ದಾರೆ. ಹಾಗಾದರೆ ಅವರು ಪಡೆದಿರುವುದೂ ಕಾನೂನುಬಾಹಿರವಾಗಬೇಕಲ್ಲ. ನೂರಾರು ಜನ ಮುಡಾದಿಂದ 50:50ರ ಸೈಟ್ ಪಡೆದುಕೊಂಡಿದ್ದಾರೆ. ಅಂದು ಬಿಜೆಪಿ ಸರ್ಕಾರ ಇದ್ದಾಗಲೇ ಸಿದ್ದರಾಮಯ್ಯ ಪತ್ನಿ ನಿವೇಶನಕ್ಕೆ ಮನವಿ ಮಾಡಿದ್ದರು. ಬಿಜೆಪಿ ಸರ್ಕಾರವೇ ಅವರಿಗೆ ನಿವೇಶನಕ್ಕೆ ಒಪ್ಪಿಗೆ ನೀಡಿ ನಿವೇಶನ ಕೊಟ್ಟಿದೆ. ಕಾನೂನುಬಾಹಿರ, ಹೀಗೆ ಸೈಟ್ ಕೊಡಲು ಆಗಲ್ಲ ಎನ್ನುವುದಾದರೆ ಅಂದೇ ಅಧಿಕಾರಿಗಳು, ಸರ್ಕಾರ ನಿವೇಶನ ಅರ್ಜಿ ವಜಾಮಾಡಬೇಕಿತ್ತು. ಈಗ ರಾಜಕೀಯ ದುರುದ್ದೇಶಕ್ಕೆ ಸಿಎಂ ವಿರುದ್ಧ ಆರೋಪ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿ ನಾಯಕರು ಈವರೆಗೆ ಒಮ್ಮೆಯಾದರೂ ಅಭಿವೃದ್ಧಿ ವಿಚಾರವಾಗಿ ಮಾತನಾಡಿದ್ದಾರಾ? ಅದ್ಯಾವುದೂ ಅವರಿಗೆ ಬೇಕಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಸುಮ್ಮನೇ ಗಲಾಟೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.