
ಬೆಂಗಳೂರು: ನನ್ನ ಫೋನ್ ಟ್ಯಾಪ್ ಆಗಿದೆ. ವಿಪಕ್ಷದವರ ಬಹುತೇಕ ಎಲ್ಲರ ಫೋನ್ ಟ್ಯಾಪಿಂಗ್ ಆಗಿದೆ. ಸಿದ್ದರಾಮಯ್ಯ ಸರ್ಕಾರ ಬಂದಾಗಿನಿಂದ ಫೋನ್ ಟ್ಯಾಪಿಂಗ್ ಮಾಡಿಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದು, ಅಶೋಕ್ ಆರೋಪಕ್ಕೆ ಅವರದೇ ಪಕ್ಷದ ಶಾಸಕ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್, ಆರ್.ಅಶೋಕ್ ಅವರ ಫೋನ್ ಟ್ಯಾಪ್ ಆಗಿದ್ದರೆ ದೂರು ನೀಡಲಿ ಎಂದರು.
ಟೆಲಿಕಾಂ ಯಾರ ಕೈಯಲ್ಲಿ ಇದೆ. ಕೇಂದ್ರದಲ್ಲಿ ಯಾವ ಸರ್ಕಾರವಿದೆ? ಅವರದೇ ಪಕ್ಷದ ಸರ್ಕಾರ ಕೇಂದ್ರದಲ್ಲಿರುವಾಗ ಕೇಂದ್ರ ಸರ್ಕಾರಕ್ಕೆ ದೂರು ನೀಡಲಿ, ತನಿಖೆ ನಡೆಸಲಿ. ಅದನ್ನು ಬಿಟ್ಟು ರಾಜಕೀಯ ದುರುದ್ದೇಶಕ್ಕೆ ರಾಜ್ಯ ಸರ್ಕಾರದ ವಿರುದ್ಧ ಅನಗತ್ಯ ಆರೋಪ ಮಾಡುತ್ತಾ ಕಾಲಹರಣ ಮಾಡುವುದು ಯಾಕೆ? ಎಂದು ಪ್ರಶ್ನಿಸಿದರು.