alex Certify ಶುಭ ಸುದ್ದಿ: ಆಲೆಮನೆಗಳಿಗೆ 5 ಲಕ್ಷ ರೂ. ಸಾಲ: ಹಮಾಲರಿಗೆ ಸಚಿವ ಸೋಮಶೇಖರ್ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: ಆಲೆಮನೆಗಳಿಗೆ 5 ಲಕ್ಷ ರೂ. ಸಾಲ: ಹಮಾಲರಿಗೆ ಸಚಿವ ಸೋಮಶೇಖರ್ ಸಿಹಿ ಸುದ್ದಿ

ಬೆಂಗಳೂರು: ಆತ್ಮನಿರ್ಭರ ಯೋಜನೆಯಡಿ ಸಾವಯವ ಬೆಲ್ಲಕ್ಕೆ ಒತ್ತು ನೀಡಲಿದ್ದು, ಮಂಡ್ಯ ಸಾವಯವ ಬೆಲ್ಲ ತಯಾರಿಸುವ ಆಲೆಮನೆಗಳಿಗೆ ತಲಾ 5 ಲಕ್ಷ ರೂಪಾಯಿ ಸಾಲ ನೀಡಲಾಗುವುದು ಎಂದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಎಪಿಎಂಸಿ ಪ್ರಧಾನ ಕಚೇರಿಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕೃಷಿ ಮಾರಾಟ ಮಂಡಳಿಯ ಪ್ರಧಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆತ್ಮನಿರ್ಭರ ಯೋಜನೆ ಅಡಿ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಸಾವಯವ ಬೆಲ್ಲ ಉತ್ಪಾದನೆ ಮಾಡಲಿರುವ ಆಲೆಮನೆಗೆ ಸಾಲ ಸೌಲಭ್ಯ ನೀಡಲು ಕ್ರಮ ವಹಿಸಲಾಗಿದ್ದು, 20 ಕೋಟಿ ರೂಪಾಯಿ ಮಂಜೂರಾತಿ ಮಾಡಲಾಗುತ್ತಿದ್ದು, ಒಂದೊಂದು ಆಲೆಮನೆಗೆ ತಲಾ 5 ಲಕ್ಷ ರೂಪಾಯಿಯಂತೆ ಸಾಲ ನೀಡಲಾಗುವುದು ಎಂದು ತಿಳಿಸಿದ್ದಾರೆ.

162 ಎಪಿಎಂಸಿ ಮಾರ್ಕೆಟ್ ಮೂಲಸೌಕರ್ಯಕ್ಕೆ 206 ಕೋಟಿ ರೂ. ಬಿಡುಗಡೆ

ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವತ್ತ ಮುಂದಾಗಿದ್ದು, ಇದರ ಮೂಲಸೌಕರ್ಯ ಅಭಿವೃದ್ಧಿಗಾಗಿ ನಬಾರ್ಡ್ ನಿಂದ 206 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಬಳಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಹಮಾಲರ ಭದ್ರತೆಗಾಗಿ ಗ್ರೂಪ್ ಇನ್ಶೂರೆನ್ಸ್

ರಾಜ್ಯದಲ್ಲಿ 24059 ಹಮಾಲರು ಕಾರ್ಯನಿರ್ವಹಿಸುತ್ತಿದ್ದು, 18 ರಿಂದ 64 ವರ್ಷದೊಳಗೆ ಇರುವ ಹಮಾಲರಿಗೆ ಜೀವ ವಿಮೆ ಜಾರಿಯಲ್ಲಿದ್ದು, ಅವರಿಗೆ ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ಎಲ್ಐಸಿ ಜೊತೆಗೂಡಿ ಗ್ರೂಪ್ ಮೈಕ್ರೋ ಟರ್ಮ್ ಅಶ್ಯೂರನ್ಸ್ ಪ್ಲಾನ್ ನೀಡುವ ಕುರಿತು ತೀರ್ಮಾನಿಸಲಾಗಿದೆ.

ಈ ಗ್ರೂಪ್ ಇನ್ಶೂರೆನ್ಸ್ ನಿಂದ ಪ್ರೀಮಿಯಂ ಮೊತ್ತ ಬರುವುದಲ್ಲದೆ, ಒಂದು ವೇಳೆ ಹಮಾಲರು ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿವರೆಗೂ ವಿಮೆ ಪರಿಹಾರ ಜಮೆಯಾಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.

ಎಲ್ಲ ಎಪಿಎಂಸಿಗಳಿಗೆ ಭೇಟಿ ನೀಡಿ ಅವುಗಳ ಸಾಧನೆ ಬಗ್ಗೆ, ಅಲ್ಲಿನ ಉತ್ಪನ್ನಗಳು ಹಾಗೂ ಅದರ ವೈಶಿಷ್ಟ್ಯದ ಬಗ್ಗೆ ಕಿರುಚಿತ್ರ ನಿರ್ಮಾಣ ಮಾಡಿ ಜನರಿಗೆ ತಲುಪಿಸುವ ಕಾರ್ಯವನ್ನು ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿರು, ಸದಾನಂದ ಗೌಡ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಎಪಿಎಂಸಿ ನಿರ್ದೇಶಕರಾದ ಕರಿಗೌಡ ಸೇರಿದಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ಸದಸ್ಯರು ಭಾಗವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...