ಮೈಸೂರು: ಮೇಕೆದಾಟು ಯೋಜನೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದವರು ಕೈಗೊಂಡಿರುವ ಪಾದಯಾತ್ರೆ ಬಹುದೊಡ್ಡ ಗಿಮಿಕ್ ಆಗಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಕಾಂಗ್ರೆಸ್ ನಾಯಕರ ದೊಡ್ಡ ಗಿಮಿಕ್ ಆಗಿದೆ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರ್ಕಾರದ ಮೇಲೆ ಮೇಕೆದಾಟು ಯೋಜನೆ ಜಾರಿಗೆ ಒತ್ತಡ ಹೇರಿದ್ದಾರೆ. ಕೇಂದ್ರ ನಾಯಕರಿಗೆ ನಿರಂತರವಾಗಿ ಒತ್ತಡ ಹೇರುತ್ತಿದ್ದು, ಮೇಕೆದಾಟು ಯೋಜನೆಗೆ ಶೀಘ್ರವೇ ಅನುಮತಿ ಸಿಗಲಿದೆ. ಇದನ್ನು ತಿಳಿದುಕೊಂಡು ಕಾಂಗ್ರೆಸ್ ಪಕ್ಷದವರು ಪಾದಯಾತ್ರೆಯನ್ನು ಮಾಡುತ್ತಿದ್ದಾರೆ ಎಂದು ಸೋಮಶೇಖರ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರು ಅವರಂತೆ ಡಿ.ಕೆ. ಶಿವಕುಮಾರ್ ಪರ್ಮನೆಂಟ್ ಮುಖ್ಯಮಂತ್ರಿ ಆಗ್ತೇನೆ ಅಂದ್ಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಸಹಕಾರ ಸಚಿವರ ಸೋಮಶೇಖರ್ ವ್ಯಂಗ್ಯವಾಡಿದ್ದಾರೆ. ಪಾದಯಾತ್ರೆ ಮಾಡಿದರೇ ಮುಖ್ಯಮಂತ್ರಿ ಆಗುತ್ತೇನೆ ಎಂದುಕೊಂಡಿದ್ದರೆ ಅದು ಡಿ.ಕೆ. ಶಿವಕುಮಾರ್ ಅವರ ಕನಸಾಗಿದೆ. ಡಿಕೆಶಿ ಯಾವ ಮುಖ್ಯಮಂತ್ರಿಯಾಗುತ್ತಾರೆ? ಮುಖ್ಯಮಂತ್ರಿ ಚಂದ್ರು ಅವರ ರೀತಿ ಪರ್ಮನೆಂಟ್ ಮುಖ್ಯಮಂತ್ರಿಯಾಗಬೇಕು ಎಂದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರೇ ಅವಧಿ ಪೂರೈಸುತ್ತಾರೆ ಎಂದು ಬಹಿರಂಗ ವೇದಿಕೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಹೇಳಿದ್ದಾರೆ. ಹೀಗಿದ್ದರೂ ಕೂಡ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.