ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಸುದೀರ್ಘ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶ್ವಾಸಕೋಶ ಸಮಸ್ಯೆಯಿಂದ ಏಪ್ರಿಲ್ 29ರಂದು ಎಸ್.ಎಂ.ಕೃಷ್ಣ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ತಿಂಗಳ ಕಾಲ ಸುದೀರ್ಘ ಚಿಕಿತ್ಸೆ ಪಡೆದು ಇದಿಗ ಸಂಪೂರ್ಣ ಗುಣಮುಖರಾಗಿರುವ ಹಿನ್ನೆಲೆಯಲ್ಲಿ ಕೃಷ್ಣ ಅವರನ್ನು ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಮಾಡಲಾಗಿದೆ.
ಈ ಬಗ್ಗೆ ಶಾಸಕ ದಿನೇಶ್ ಗೂಳಿಗೌಡ ಮಾಹಿತಿ ನೀಡಿದ್ದು, ಎಸ್.ಎಂ.ಕೃಷ್ಣ ಅವರ ಆರೋಗ್ಯ ಸುಧಾರಿಸಿದ್ದು ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಶ್ವಾಸಕೋಶದ ಸೊಂಕು ನಿವಾರಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿರುವುದಾಗಿ ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂದರು.
ಎರಡು ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದು ಯಾವುದೆ ಸಾರ್ವಜನಿಕ ಭೇಟಿ ಮತ್ತು ಕಾರ್ಯಕ್ರಮಗಳಿಗೆ ಪಾಲ್ಗೊಳ್ಳದಂತೆ ಸೂಚಿಸಿದ್ದಾರೆ.
ಈ ನಿಟ್ಟಿನಲ್ಲಿ ಯಾರೂ ಅನ್ಯತಾ ಭಾವಿಸಬಾರದು, ಅವರ ಹಿತೈಷಿಗಳು, ಅಭಿಮಾನಿಗಳು ಕೆಲವು ದಿನಗಳ ಕಾಲ ಅವರನ್ನು ಭೇಟಿ ಮಾಡದಂತೆ ಕುಟುಂಬ ವರ್ಗದವರಿಗೆ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಎಲ್ಲರೂ ಎಸ್.ಎಂ.ಕೃಷ್ಣ ವಿಶ್ರಾಂತಿ ಪಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.