ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ವಿಧಿವಶರಾಗಿದ್ದು, ರಾಜಕೀಯ ನಾಯಕರು, ಸಿನಿ ತಾರೆಯರು, ಕ್ರೀಡಾಪಟುಗಳು ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದಿದ್ದಾರೆ. ನಟ ಶಿವರಾಜ್ ಕುಮಾರ್ ಬೆಂಗಳೂರಿನ ಸದಾಶಿವ ನಗರಕ್ಕೆ ಆಗಮಿಸಿ ಎಸ್.ಎಂ.ಕೃಷ್ಣ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ, ಡಾ.ರಾಜ್ ಕುಮಾರ್ ಅಪಹರಣದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಅಂದು ಅವರು ಮಾಡಿದ್ದ ಸಹಾಯದ ಬಗ್ಗೆ ಸ್ಮರಿಸಿದರು.
ವೀರಪ್ಪನ್ ಅಂದು ಅಪ್ಪಾಜಿ ಅವರ ಅಪಹರಣ ಮಾಡಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದರು. ಅಂದು ಅವರು ನಮ್ಮ ಕುಟುಂಬದ ಜೊತೆ ನಿಂತಿದ್ದರು. ಅವರ ಸಹಾಯವನ್ನು ಎಂದೂ ಮರೆಯಲಾಗದು. ಎಸ್.ಎಂ.ಕೃಷ್ಣ ಕುಟುಂಬದ ಜೊತೆ ನಮ್ಮ ಒಡನಾಟ ಸಾಕಷ್ಟಿದೆ. ಅವರ ಮೇಲೆ ಅಪಾರವಾದ ಗೌರವ ಎಂದರು.
ಎಸ್.ಎಂ.ಕೃಷ್ಣ ಅವರ ಇಡೀ ಕುಟುಂಬದ ಜೊತೆ ನಮಗೆ ಒಳ್ಳೆಯ ಬಾಂಧವ್ಯವಿದೆ. ಎಸ್.ಎಂ.ಕೃಷ್ಣ ಇನ್ನಿಲ್ಲ ಎನ್ನುವುದು ತುಂಬಾ ದು:ಖವನ್ನುಂಟುಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.