ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿಧಿವಶರಾಗಿದ್ದು, ನಾಳೆ ಅವರ ಹುಟ್ಟೂರು ಸೋಮನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಸಾವಿರ ಕೆಜಿ ಶ್ರೀಗಂಧದಿಂದ ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಶಾಸಕ ಗಣಿಗ ರವಿ ತಿಳಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಎಸ್.ಎಂ.ಕೃಷ್ಣ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಶಾಸಕ ಗಣಿಗ ರವಿ, 1000 ಕೆಜಿ ಶ್ರೀಗಂಧದ ಕಟ್ಟಿಗೆಯಿಂದ ಎಸ್.ಎಂ.ಕೃಷ್ಣ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದರು.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಶ್ರೀಗಂಧದ ಮರಗಳನ್ನು ರೈತರು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗೌರವವಾರ್ಥವಾಗಿ ಶ್ರೀಗಂಧದಿಂದ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಮಂಡ್ಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಹೆರಿಗೆ ಆಸ್ಪತ್ರೆಗೆ ಎಸ್.ಎಂ.ಕೃಷ್ಣ ಹೆಸರಿಡಲಾಗುವುದು. ಮಂಡ್ಯದಲ್ಲಿನ ಒಂದು ಉದ್ಯಾನವನಕ್ಕೂ ಎಸ್.ಎಂ.ಕೃಷ್ಣ ಹೆಸರಿಡಲಾಗುವುದು ಎಂದು ತಿಳಿಸಿದರು.