
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರ ಮಂಗೇನಹಳ್ಳಿ ಬಳಿ ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವೇಗೌಡರ ಕುಟುಂಬಕ್ಕೆ ಧರ್ಮೇಗೌಡರು ಆಪ್ತರಾಗಿದ್ದರು. ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ. ಹೆಚ್.ಡಿ. ಕುಮಾರಸ್ವಾಮಿ ಆಪ್ತರಾಗಿದ್ದ ಧರ್ಮೇಗೌಡರು ನಿನ್ನೆ ರಾತ್ರಿ 7 ಗಂಟೆ ಸುಮಾರಿಗೆ ಒಬ್ಬರೇ ಮನೆಯಿಂದ ಕಾರ್ ನಲ್ಲಿ ತೆರಳಿದ್ದಾರೆ.
ಗನ್ ಮ್ಯಾನ್ ಮತ್ತು ಎಸ್ಕಾರ್ಟ್ ಸಿಬ್ಬಂದಿಯನ್ನು ಮನೆಗೆ ಕಳುಹಿಸಿ ಒಬ್ಬರೇ ಕಾರ್ ನಲ್ಲಿ ತೆರಳಿದ್ದಾರೆ. ರಾತ್ರಿ 10 ಗಂಟೆಯಾದರೂ ಅವರು ಮನೆಗೆ ವಾಪಸ್ ಆಗದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿದ್ದು, 11:30 ರ ವೇಳೆಗೆ ಗುಣಸಾಗರ ಸಮೀಪ ಅವರ ಮೃತದೇಹ ಪತ್ತೆಯಾಗಿದೆ. ಘಟನಾಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
1955 ಡಿಸೆಂಬರ್ 16 ರಂದು ಚಿಕ್ಕಮಗಳೂರು ತಾಲೂಕಿನ ಸರಪನಹಳ್ಳಿಯಲ್ಲಿ ಎಸ್.ಆರ್. ಲಕ್ಷ್ಮಯ್ಯ, ಕೃಷ್ಣಮ್ಮ ದಂಪತಿ ಮಗನಾಗಿ ಜನಿಸಿದ್ದು, ಮಮತಾ ಅವರೊಂದಿಗೆ ಮದುವೆಯಾಗಿದ್ದರು. ಅವರಿಗೆ ಮಗ ಸೋನಾಲ್, ಮಗಳು ಸಲೋನಿ ಇದ್ದಾರೆ. ಜೆಡಿಎಸ್ ಪಕ್ಷದಿಂದ ಕಡೂರು ಕ್ಷೇತ್ರದ ಶಾಸಕರಾಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿ ಉಪಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರ ಸಹೋದರ ಭೋಜೇಗೌಡ ಕೂಡ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.