ಶಿವಮೊಗ್ಗ: ನಾನು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಶಿಷ್ಯ. ಅವರಿದ್ದ ಮನೆಯನ್ನೇ ಪಡೆದುಕೊಂಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ಬಂಗಲೆ ಆಯ್ಕೆ ರಹಸ್ಯ ಬಿಚ್ಚಿಟ್ಟಿದ್ದಾರೆ.
ಶಿವಮೊಗ್ಗದಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾನಿರುವ ಸರ್ಕಾರಿ ಬಂಗಲೆಯನ್ನು ಆಯ್ಕೆ ಮಾಡಿಕೊಳ್ಳಲು ಬಂಗಾರಪ್ಪನವರು ಕಾರಣ ಎಂದು ಹೇಳಿದ್ದಾರೆ.
ಬೆಂಗಳೂರಿನ ಕುಮಾರ ಕೃಪದಲ್ಲಿರುವ ಸರ್ಕಾರಿ ಬಂಗಲೆ ಆಯ್ಕೆ ಮಾಡಿಕೊಳ್ಳಲು ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದ್ದರು ಎಂದಲ್ಲ, ನಾನು ಬಂಗಾರಪ್ಪನವರ ಶಿಷ್ಯ. ಬಂಗಾರಪ್ಪನವರು ಇದ್ದ ಸಂದರ್ಭದಲ್ಲಿ ಅಲ್ಲಿ ಅವರಿಗಾಗಿ ಮಾವಿನ ಮರದ ಕೆಳಗೆ ನಾಲ್ಕು ವರ್ಷ ಕಾಯುತ್ತಾ ಇದ್ದೆ. ಬಂಗಾರಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಕಂದಾಯ ಸಚಿವರಾಗಿದ್ದರು. ಅನೇಕ ಇಲಾಖೆಗಳ ಸಚಿವರಾಗಿ ಮುಖ್ಯಮಂತ್ರಿ ಆಗಿದ್ದರು. ಆ ಮನೆಗೆ ಹೋಗಿ ಬಂಗಾರಪ್ಪನವರಿಗಾಗಿ ಕಾಯುತ್ತಿದ್ದೆ. ಅಲ್ಲಿಗೆ ಹೋಗಲು ಅವಕಾಶ ಸಿಕ್ಕ ಕಾರಣಕ್ಕೆ ಅದೇ ಬಂಗಲೆಗೆ ಹೋಗುತ್ತಿದ್ದೇನೆ. ಪೂಜೆ ಕೂಡ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ.