ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಡಿಹೊಗಳಿದ್ದಾರೆ. ಮೋದಿಯವರು ದೇಶಭಕ್ತರಾಗಿದ್ದು, ದೂರದೃಷ್ಟಿಯುಳ್ಳ ನಾಯಕರಾಗಿರುವ ಅವರ ನೇತೃತ್ವದಲ್ಲಿ ಭಾರತ ಮುಂದಿನ ದಿನಗಳಲ್ಲಿ ವಿಶ್ವಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪುಟಿನ್ ಅಭಿಪ್ರಾಯಪಟ್ಟಿದ್ದಾರೆ.
ಮಾಸ್ಕೋ ಮೂಲದ ಚಿಂತಕರ ಚಾವಡಿ ‘ವಾಲ್ಡೈ’ ಚರ್ಚಾ ಕ್ಲಬ್ ನಲ್ಲಿ ಗುರುವಾರದಂದು ವಾರ್ಷಿಕ ಭಾಷಣ ಮಾಡಿದ ವ್ಲಾಡಿಮಿರ್ ಪುಟಿನ್, ಮೋದಿ ಅವರ ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಶ್ಲಾಘಿಸಿದ್ದು, ಭಾರತ ಆರ್ಥಿಕ ಪ್ರಗತಿ ಸಾಧಿಸಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿಯವರು ಸ್ವತಂತ್ರ ವಿದೇಶಾಂಗ ನೀತಿಯನ್ನು ಪಾಲಿಸುತ್ತಿರುವ ವಿಶ್ವದ ನಾಯಕರ ಪೈಕಿ ಪ್ರಮುಖರಾಗಿದ್ದಾರೆ ಎಂದು ಪ್ರಶಂಸಿಸಿದ ಪುಟಿನ್, ಭಾರತದೊಂದಿಗೆ ರಷ್ಯಾ ನಿಕಟ ಬಾಂಧವ್ಯವನ್ನು ಹೊಂದಿದ್ದು ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರಿಸಿಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದ್ದಾರೆ.