ಅಲ್ಬೇನಿಯಾದ ಫೈವ್ ಸ್ಟಾರ್ ಹೋಟೆಲ್ನ ಸೌನಾದಲ್ಲಿ ರಷ್ಯಾ ಮೂಲದ ನಾಲ್ವರು ಕುಟುಂಬ ಸದಸ್ಯರು ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಉಸಿರುಗಟ್ಟಿ ಕುಟುಂಬ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.
ವರದಿಗಳ ಪ್ರಕಾರ, ಅವರು ರಜಾದಿನಗಳಲ್ಲಿ ಅಲ್ಬೇನಿಯಾಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಗ್ಲೋರಿಯಾ ಪ್ಯಾಲೇಸ್ ಹೋಟೆಲ್ನಲ್ಲಿ ಒಂದು ವಾರ ತಂಗಲು ನಿರ್ಧರಿಸಿದ್ದರು. ಸೆರ್ಗೆ ಬುರೆಂಕೋವ್ (60),ಅವರ ಪತ್ನಿ ನಟಾಲಿಯಾ ಬುರೆಂಕೋವಾ (58), ಅವರ ಮಗಳು ಕಟ್ಯಾ (31) ಮತ್ತು ಅವಳ ಸಂಗಾತಿ ನಿಕಿತಾ ಬೆಲೊಸೊವ್ (37) ರೊಂದಿಗೆ ರಜೆಯ ಮಜಾಕ್ಕೆ ತೆರಳಿದ್ದರು.
ಆಹಾರ ತಲುಪಿಸಲು ಹೋಗಿದ್ದ ಹೋಟೆಲ್ ಸಿಬ್ಬಂದಿ ಶವಗಳನ್ನು ಹೊರತೆಗೆದಿದ್ದಾರೆ. ಹೋಟೆಲ್ ಮ್ಯಾನೇಜ್ಮೆಂಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ನಿಗೂಢ ಸಾವಿನ ಕುರಿತು ತನಿಖೆ ಮುಂದುವರಿದಿದೆ.
ರಷ್ಯಾದ ರಾಜತಾಂತ್ರಿಕ ಮೂಲವು ಅಲ್ಬೇನಿಯಾದ ರಾಜಧಾನಿ ಟಿರಾನಾದಲ್ಲಿರುವ ರಷ್ಯಾದ ರಾಯಭಾರ ಕಚೇರಿಯೂ ಸಾವಿನ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಬಹಿರಂಗಪಡಿಸಿದೆ. ಸ್ಥಳೀಯ ಪೊಲೀಸರು ಸೌನಾ ಕಾಂಪ್ಲೆಕ್ಸ್ನಲ್ಲಿ ವಾತಾಯನ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಇಲ್ಲವೇ ಎಂದು ತನಿಖೆ ನಡೆಸುತ್ತಿದ್ದಾರೆ.