ಸಾಮಾನ್ಯವಾಗಿ ಮಗು ಹುಟ್ಟಿದ ಕೂಡಲೇ ಹೆತ್ತವರ ಗಮನವೆಲ್ಲಾ ಅದರ ಮೇಲೆಯೇ ಇರುತ್ತದೆ. ಮಗುವಿಗೆ ಸೂಕ್ತವಾಗಿ ಹಾಲುಣಿಸಿ, ಅದಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.
ಆದರೆ ರಷ್ಯಾದ ಜೋಡಿಯೊಂದು ಇದಕ್ಕೆ ತದ್ವಿರುದ್ಧವಾದ ಕೆಲಸ ಮಾಡಿದ್ದು, ಮಗುವಿಗೆ ಆಹಾರ ನೀಡದೇ ಸಾವಿಗೆ ತಳ್ಳಿದ ಆಪಾದನೆ ಮೇಲೆ ಕಾನೂನಿನ ಬಂಧನದಲ್ಲಿದ್ದಾರೆ.
ಆಕ್ಸಾನಾ ಮಿರೋನೊವಾ 33, ಹಾಗೂ ಆಕೆಯ ಪತಿ ಮ್ಯಾಕ್ಸಿಮ್ ಲ್ಯೂಟಿ 43, ತಮ್ಮ ಮಗುವಿನ ’ಸೂರ್ಯನ ಬೆಳಕನ್ನೇ ಆಹಾರವನ್ನಾಗಿ ನೀಡುವುದರಲ್ಲಿ’ ನಂಬಿಕೆ ಇಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ನಿರ್ಲಕ್ಷ್ಯದ ಕಾರಣ ತನ್ನ ಮಗುವಿನ ಸಾವಿಗೆ ಕಾರಣವಾದ ಆರೋಪದ ಮೇಲೆ ತಾಯಿಯು ಸದ್ಯ ಗೃಹ ಬಂಧನದಲ್ಲಿದ್ದಾಳೆ.
’ಸ್ವಾಭಾವಿಕ ಆಹಾರ ಪ್ರಿಯ’ ಎಂದು ಗುರುತಿಸಿಕೊಂಡಿರುವ ಮ್ಯಾಕ್ಸಿಂನನ್ನು ಪೊಲೀಸರು ಪ್ರತ್ಯೇಕವಾಗಿ ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
“ತನ್ನದೇ ವ್ಯಾಖ್ಯಾನದಲ್ಲಿ ಆಪಾದಿತ ತನ್ನ ಮಗುವನ್ನು ಪೋಷಣೆ ಮಾಡಿದ ಕಾರಣ, ಮಗುವು ತೀವ್ರ ದಣಿವಿನಿಂದ ಮೃತಪಟ್ಟಿದೆ,” ಎಂದು ಝ್ವೆಝ್ಡಾ ನ್ಯೂಸ್ ಸುದ್ದಿ ಮಾಡಿದೆ.
ಒಂದು ತಿಂಗಳ ಈ ಮಗು ತೀವ್ರ ಹಸಿವು, ನ್ಯೂಮೋನಿಯಾಗಳಿಂದ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ. ಸೋಚಿಯ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಿದ ವೇಳೆ ಈ ವಿಚಾರಗಳು ತಿಳಿದು ಬಂದಿವೆ. ಬ್ಲ್ಯಾಕ್ ಸೀ ರೆಸಾರ್ಟ್ ನಗರ ಸೋಚಿಯಲ್ಲಿ ಸಂಭವಿಸಿದ ಈ ದುರ್ಘಟನೆಯ ಹಿಂದಿನ ಕಾರಣ ಅರಿಯಲು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.