ನವದೆಹಲಿ: ರಷ್ಯಾ ಸೇನಾ ಪಡೆ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದು, ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತೀಯರ ಏರ್ ಲಿಫ್ಟ್ ಮಾಡಲಾಗುತ್ತಿದೆ. ಇಂದು ಎರಡು ಏರ್ ಇಂಡಿಯಾ ವಿಮಾನಗಳಲ್ಲಿ ಉಕ್ರೇನ್ ನಲ್ಲಿರುವ ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗುತ್ತದೆ. ಬುಡಾಪೆಸ್ಟ್ ಮತ್ತು ಬುಖಾರೆಸ್ಟ್ ನಿಂದ ಏರ್ ಇಂಡಿಯಾ ವಿಮಾನದಲ್ಲಿ ಭಾರತೀಯರ ಏರ್ಲಿಫ್ಟ್ ಮಾಡಲಾಗುತ್ತದೆ.
ರಷ್ಯಾ ಕಾರ್ಯಾಚರಣೆ ಅಂತ್ಯಗೊಳಿಸಲು ಭಾರತದ ವಿದೇಶಾಂಗ ಸಚಿವರಿಗೆ ಕರೆ:
ಉಕ್ರೇನ್ ವಿದೇಶಾಂಗ ಸಚಿವರಿಂದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಗೆ ಕರೆ ಮಾಡಿ, ರಷ್ಯಾ ಸೇನಾ ಕಾರ್ಯಾಚರಣೆ ಅಂತ್ಯಗೊಳಿಸುವಂತೆ ಮನವಿ ಮಾಡಲಾಗಿದೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧದ ಪ್ರಭಾವ ಬಳಸಿ ಉಕ್ರೇನ್ ನಲ್ಲಿ ರಷ್ಯಾ ಸೇನಾ ಕಾರ್ಯಾಚರಣೆಯನ್ನು ಅಂತ್ಯಗೊಳಿಸಬೇಕೆಂದು ಮನವಿ ಮಾಡಲಾಗಿದೆ.
ಮತ್ತೆರಡು ದೇಶಗಳಿಗೆ ರಷ್ಯಾ ವಾರ್ನಿಂಗ್
ಫಿನ್ಲ್ಯಾಂಡ್ ಮತ್ತು ಸ್ವೀಡನ್ ದೇಶಗಳಿಗೆ ರಷ್ಯಾ ವಾರ್ನಿಂಗ್ ಕೊಟ್ಟಿದೆ. ನ್ಯಾಟೋಗೆ ಸೇರಿದರೆ ಗಂಭೀರ ಪರಿಣಾಮವನ್ನು ಎದುರಿಸುತ್ತೀರಿ. ಅಗತ್ಯವಾದರೆ ನಿಮ್ಮ ವಿರುದ್ಧವೂ ಯುದ್ಧ ಮಾಡುತ್ತೇವೆ ಎಂದು ಫಿನ್ಲ್ಯಾಂಡ್ ಮತ್ತು ಸ್ವೀಡನ್ ಗೆ ರಷ್ಯಾ ವಾರ್ನಿಂಗ್ ಮಾಡಿದೆ. ನ್ಯಾಟೋ ಸೇರಲು ಮುಂದಾಗಿದ್ದ ಉಕ್ರೇನ್ ಈಗ ಏಕಾಂಗಿಯಾಗಿದೆ. ಸಹಾಯ ಹಸ್ತ ಚಾಚುವುದಾಗಿ ಹೇಳಿದ್ದ ನ್ಯಾಟೋ ದೇಶಗಳು ಕೈಕೊಟ್ಟಿವೆ. ಇದರಿಂದ ಏಕಾಂಗಿಯಾದ ಉಕ್ರೇನ್ ರಷ್ಯಾ ದಾಳಿಗೆ ತತ್ತರಿಸಿದೆ. ಇದನ್ನು ಗಮನಿಸಿರುವ ಉಳಿದ ರಾಷ್ಟ್ರಗಳು ನ್ಯಾಟೋ ಸೇರುವ ಸಾಧ್ಯತೆ ಇಲ್ಲವೆನ್ನಲಾಗಿದ್ದರೂ, ರಷ್ಯಾ ಯುದ್ಧ ಸಾರುವುದಾಗಿ ಫಿನ್ಲ್ಯಾಂಡ್ ಮತ್ತು ಸ್ವೀಡನ್ ದೇಶಗಳಿಗೆ ವಾರ್ನಿಂಗ್ ಕೊಟ್ಟಿದೆ.
ಉಕ್ರೇನ್ ತೊರೆದ 50 ಸಾವಿರಕ್ಕೂ ಅಧಿಕ ಜನ
ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ 50 ಸಾವಿರಕ್ಕೂ ಅಧಿಕ ಜನ ಉಕ್ರೇನ್ ತೊರೆದಿದ್ದಾರೆ. ಯುದ್ಧದ ನಡುವೆ ಪ್ರಾಣ ಉಳಿಸಿಕೊಳ್ಳಲು ಜನರು ಉಕ್ರೇನ್ ತೊರೆಯುತ್ತಿದ್ದಾರೆ. 48 ಗಂಟೆಗಳಲ್ಲಿ 50 ಸಾವಿರಕ್ಕೂ ಅಧಿಕ ಜನ ಉಕ್ರೇನ್ ನಿಂದ ತೆರಳಿದ್ದಾರೆ.
ರಷ್ಯಾ ಸರ್ಕಾರಿ ವೆಬ್ ಸೈಟ್ ಸ್ಥಗಿತ:
ಸೈಬರ್ ದಾಳಿ ಭೀತಿಯಿಂದ ರಷ್ಯಾ ಸರ್ಕಾರಿ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಉಕ್ರೇನ್ ಸೈಬರ್ ದಾಳಿ ನಡೆಸುವ ಆತಂಕದ ಹಿನ್ನಲೆಯಲ್ಲಿ ರಷ್ಯಾ ಸರ್ಕಾರದ ಎಲ್ಲ ವೆಬ್ಸೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ.