ಮಾಸ್ಕೋ/ಕೈವ್: ರಷ್ಯಾ, ಉಕ್ರೇನ್ ನಡುವಿನ ಕಾದಾಟ ಉಲ್ಬಣಗೊಳ್ಳುತ್ತಲೇ ಇರುವುದರಿಂದ ಬೆಲಾರಸ್ ನಲ್ಲಿರುವ ಉಕ್ರೇನ್ ಸರ್ಕಾರದೊಂದಿಗೆ ತಾನು ಮಾತುಕತೆಗೆ ಸಿದ್ಧ ಎಂದು ರಷ್ಯಾ ಭಾನುವಾರ ಹೇಳಿದೆ. ಉಕ್ರೇನ್ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ರಷ್ಯಾದ ನಿಯೋಗವು ಬೆಲಾರಸ್‌ನ ಗೊಮೆಲ್‌ಗೆ ತಲುಪಿದೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ಕ್ರೆಮ್ಲಿನ್‌ನ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಕೈವ್ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ, ಆದರೆ, ಅವರು ಬೆಲಾರಸ್‌ನಲ್ಲಿ ಚರ್ಚೆ ನಡೆಸುವ ಆಯ್ಕೆಯನ್ನು ತಳ್ಳಿಹಾಕಿದ್ದಾರೆ, ಉಕ್ರೇನ್ ಕಡೆಗೆ ಆಕ್ರಮಣಶೀಲತೆಯನ್ನು ತೋರಿಸದ ಸ್ಥಳಗಳಲ್ಲಿ ಮಾತುಕತೆಗೆ ಮುಕ್ತವಾಗಿದೆ ಎಂದು ಅವರು ಹೇಳಿದರು. ರಷ್ಯಾ ಮೊದಲು ಯುದ್ಧ ನಿಲ್ಲಿಸಲಿ, ಮಾತುಕತೆಗೆ ನಾವು ಸಿದ್ಧವಾಗಿದ್ದೇವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಫೆಬ್ರವರಿ 24 ರಂದು ಕೈವ್ ವಿರುದ್ಧ ಯುದ್ಧ ಘೋಷಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಸಶಸ್ತ್ರ ಪಡೆಗಳ ವಿಶೇಷ ಕಾರ್ಯಾಚರಣೆ ಪಡೆಗಳಿಗೆ ಧನ್ಯವಾದ ಸಲ್ಲಿಸಿದ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.