ಉಕ್ರೇನ್ ಮೇಲೆ ಆಕ್ರಮಣದ ಬಳಿಕ ಬಹುತೇಕ ದೇಶಗಳು ರಷ್ಯಾ ವಿರುದ್ಧ ಮುನಿಸಿಕೊಂಡಿವೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ರಷ್ಯ ಮೇಲೆ ನಿರ್ಬಂಧಗಳನ್ನೂ ಹೇರಿವೆ. ಇದರ ಎಫೆಕ್ಟ್ ಈಗ ಕೇರಳಕ್ಕೂ ತಟ್ಟಿದೆ.
ರಷ್ಯಾದ ಪ್ರವಾಸಿಗರನ್ನು ಕೇರಳ ಕೈಬೀಸಿ ಕರೆಯುತ್ತಿತ್ತು. ಕೇರಳವನ್ನು ಕಣ್ತುಂಬಿಕೊಳ್ಳಲು ಬಂದಿದ್ದ ಹಲವು ರಷ್ಯನ್ನರು ಈಗ ಕಂಗಾಲಾಗಿದ್ದಾರೆ. ಕೈಯಲ್ಲಿ ಕಾಸಿಲ್ಲದೆ ಒದ್ದಾಡ್ತಿದ್ದಾರೆ. ಯಾಕಂದ್ರೆ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಅವರ ಖಾತೆಯಲ್ಲಿನ ಹಣವನ್ನು ಸಹ ವಿತ್ ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ.
ರಷ್ಯಾದ ಹಲವು ಬ್ಯಾಂಕ್ ಗಳು SWIFT ಅಂತಾರಾಷ್ಟ್ರೀಯ ಹಣಕಾಸು ಸಂದೇಶ ಜಾಲವನ್ನು ಹೊಂದಿವೆ. ವ್ಯವಹಾರಗಳ ಬಗ್ಗೆ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಸಂವಹನ ಮಾಡಲು ಬ್ಯಾಂಕುಗಳಿಗೆ SWIFT ಅವಕಾಶ ನೀಡುತ್ತದೆ. ಆದ್ರೀಗ SWIFT ನಿಂದ ರಷ್ಯಾವನ್ನು ಹೊರಕ್ಕಿಡಲಾಗಿದೆ.
ಕೇರಳದಲ್ಲೀಗ ಒಂದಷ್ಟು ರಷ್ಯನ್ ಪ್ರವಾಸಿಗರು ಬೀಡುಬಿಟ್ಟಿದ್ದಾರೆ. ಅವರ ಪೈಕಿ ಕೆಲವರ ವೀಸಾ ಕೂಡ ಮುಗಿಯುತ್ತಿದೆ. ಮುಂದೇನು ಅನ್ನೋದು ತೋಚದೆ ಅವರು ಕಂಗಾಲಾಗಿ ಕುಳಿತಿದ್ದಾರೆ. ಕೆಲವರಿಗೆ ತಾತ್ಕಾಲಿಕ ಕ್ರೆಡಿಟ್ ಕಾರ್ಡ್ ಸಿಕ್ಕಿದ್ದು, ಸದ್ಯಕ್ಕೆ ಬಚಾವ್ ಆಗಿದ್ದಾರೆ. ಹಲವು ದೇಶಗಳು ರಷ್ಯಾದ ವಿಮಾನಗಳ ಹಾರಾಟಗಳನ್ನೂ ನಿರ್ಬಂಧಿಸಿರೋದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ.
ಹಲವರು ಭಾರತದಲ್ಲೇ ಉಳಿದುಕೊಳ್ಳುವಂತಾಗಿದ್ದು, ವೀಸಾ ವಿಸ್ತರಣೆಗೆ ಹಣ ಖರ್ಚು ಮಾಡಬೇಕಾಗಿದೆ. ಕೇರಳ ಬಿಟ್ರೆ ರಷ್ಯಾದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದುದು ಗೋವಾ. ವಿದೇಶೀ ಪ್ರವಾಸಿಗರ ಮೇಲೆ ಅವಲಂಬಿತವಾಗಿದ್ದ ಗೋವಾ ಕೂಡ ಈಗ ಬಣಗುಡುತ್ತಿದೆ. ರಷ್ಯಾ ಹಾಗೂ ಉಕ್ರೇನ್ ಪ್ರವಾಸಿಗರನ್ನು ಅವಲಂಬಿಸಿದ್ದ ಗೋವಾದ ಚಾರ್ಟರ್ ಪ್ರವಾಸೋದ್ಯಮ ವಿಭಾಗಕ್ಕೆ ಭಾರೀ ಹೊಡೆತ ಬಿದ್ದಿದೆ.
ಕೋವಿಡ್ ನಿಂದಾಗಿ ಸೀಸನ್ ಕೂಡ ತಡವಾಗಿ ಪ್ರಾರಂಭವಾಗಿದ್ದು. ಈವರೆಗೆ ರಷ್ಯಾದಿಂದ 6 ಚಾರ್ಟರ್ ಫ್ಲೈಟ್ ಗಳು ಬಂದಿದ್ದು, 3000 ಪ್ರವಾಸಿಗರು ಆಗಮಿಸಿದ್ದರು. ಆದ್ರೀಗ ಸದ್ಯಕ್ಕಂತೂ ಮತ್ತೆ ರಷ್ಯಾದಿಂದ ಫ್ಲೈಟ್ ಬರುವುದು ಅಸಾಧ್ಯ ಎನಿಸಿದೆ.