ಕೀವ್: ರಾಷ್ಯಾ ಭೀಕರ ದಾಳಿಗೆ ಉಕ್ರೇನ್ ಪ್ರಬಲ ಪ್ರತಿದಾಳಿ ನಡೆಸಿದ್ದು, ರಷ್ಯಾದ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸುತ್ತಿರುವ ಉಕ್ರೇನ್, 3,500 ಸೈನಿಕರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದೆ.
ಉಕ್ರೇನ್ ಮೇಲೆ ಕಳೆದ ಮೂರು ದಿನಗಳಿಂದ ಯುದ್ಧ ಸಾರಿರುವ ರಷ್ಯಾ, ಸೇನಾನೆಲೆಗಳನ್ನು ಮಾತ್ರವಲ್ಲ ಜನವಸತಿ ಪ್ರದೇಶ, ಆಸ್ಪತ್ರೆಗಳ ಮೇಲೂ ದಾಳಿ ನಡೆಸಿದೆ. ಈ ನಡುವೆ ಈವರೆಗೆ ಉಕ್ರೇನ್ ನ 821 ಸೇನಾ ಘಟಕಗಳನ್ನು ಧ್ವಂಸಗೊಳಿಸಿರುವುದಾಗಿ ಹೇಳಿಕೊಂಡಿದೆ.
ಕೀವ್ ನಗರದಲ್ಲಿ ಅತಿ ಎತ್ತರದ ಅಪಾರ್ಟ್ ಮೆಂಟ್ ಮೇಲೆ ರಷ್ಯಾ ಸೇನೆ ಕ್ಷಿಪಣಿ ದಾಳಿ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ತಾನು ಯಾವುದೇ ಜನವಸತಿ ಪ್ರದೇಶದ ಮೇಲೆ ದಾಳಿ ನಡೆಸಿಲ್ಲ ಬದಲಾಗಿ ಉಕ್ರೇನ್ ನ 821 ಸೇನಾ ಯುನಿಟ್ ಗಳ ಮೇಲೆ ದಾಳಿ ನಡೆಸಲಾಗಿದೆ. 24 ಏರ್ ಡಿಫೆನ್ಸ್ ಕ್ಷಿಪಣಿಗಳನ್ನು ಹಾಗೂ 48 ರಾಡಾರ್ ಕೇಂದ್ರಗಳನ್ನು ಧ್ವಂಸ ಮಾಡಿರುವುದಾಗಿ ತಿಳಿಸಿದೆ.
ಇದೇ ವೇಳೆ ರಷ್ಯಾ ದಾಳಿಗೆ ಪ್ರತಿ ದಾಳಿ ನಡೆಸಿರುವ ಉಕ್ರೇನ್, ಈವರೆಗೂ 3,500 ರಷ್ಯನ್ ಸೈನಿಕರನ್ನು ಹತ್ಯೆ ಮಾಡಿದ್ದು, 200ಕ್ಕೂ ಹೆಚ್ಚು ಯುದ್ಧಕೈದಿಗಳನ್ನು ಸೆರೆಹಿಡಿದ್ದೇವೆ ಎಂದು ತಿಳಿಸಿದೆ.
ರಷ್ಯಾದ 102 ಯುದ್ಧ ಟ್ಯಾಂಕರ್, 536 ಶಸ್ತ್ರಾಸ್ತ್ರ ವಾಹನಗಳು, ಸ್ಯಾಮ್ ಬಂಕ್ ಎಂ2-1 ಯುದ್ಧ ಬಂಕರ್, ನೂರಾರು ಬಂದೂಕು, ಫಿರಂಗಿಗಳನ್ನು ನಾಶಪಡಿಸಿದ್ದಾಗಿ ಹೇಳಿಕೊಂಡಿದೆ.