ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಭಾರತೀಯ ವಿದ್ಯಾರ್ಥಿಗಳಿಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈಗ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಗುಂಡು ತಗುಲಿ ಭಾರತೀಯ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಸಚಿವ(ಎಂಒಎಸ್) ಜನರಲ್ ವಿ.ಕೆ. ಸಿಂಗ್ ಪೋಲೆಂಡ್ ನ ರ್ಜೆಸ್ಜೋವ್ ವಿಮಾನ ನಿಲ್ದಾಣದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದರು.
ಕೈವ್ ನಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನ ಮೇಲೆ ಗುಂಡು ಹಾರಿಸಲಾಗಿದೆ. ತಕ್ಷಣ ಅವರನ್ನು ಕೈವ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಂಗ್ ತಿಳಿಸಿದರು.
ಭಾರತೀಯ ರಾಯಭಾರ ಕಚೇರಿಯು ಈ ಹಿಂದೆ ಎಲ್ಲರೂ ಕೈವ್ ತೊರೆಯಬೇಕು ಎಂದು ತಿಳಿಸಿತ್ತು. ಯುದ್ಧದ ಸಂದರ್ಭದಲ್ಲಿ ಬುಲೆಟ್ ಯಾರ ಧರ್ಮ ಮತ್ತು ರಾಷ್ಟ್ರೀಯತೆಯನ್ನು ನೋಡುವುದಿಲ್ಲ ಎಂದು ಅವರು ಹೇಳಿದರು.
ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಕ್ರಮಕೈಗೊಂಡಿದ್ದು, ಪೋಲೆಂಡ್ ಗಡಿ ತಲುಪಲು ವಿದ್ಯಾರ್ಥಿಗಳು ಪ್ರಯತ್ನಿಸುತ್ತಿದ್ದಾರೆ.
ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿ.ಕೆ. ಸಿಂಗ್ ಉಕ್ರೇನ್ ಗೆ ಹೊಂದಿಕೊಂಡಿರುವ ದೇಶಗಳಲ್ಲಿ ಸ್ಥಳಾಂತರಿಸುವ ಪ್ರಯತ್ನಗಳನ್ನು ನೋಡಿಕೊಳ್ಳುತ್ತಿದ್ದಾರೆ.