ರಷ್ಯಾ ಮಕ್ಕಳಿಗೆ ಮೂಗಿನ ಮೂಲಕ ಕೊರೋನಾ ಲಸಿಕೆ ನೀಡುವ ಪ್ರಯೋಗ ನಡೆಸಿದ್ದು, ಸೆಪ್ಟೆಂಬರ್ ಮಧ್ಯಭಾಗದಲ್ಲಿ ಈ ಲಸಿಕೆ ಲಭ್ಯವಾಗಲಿದೆ.
ರಷ್ಯಾದ ಗಮಾಲೆಯ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಮೂಗಿನ ಮೂಲಕ ಸಿಂಪಡಿಸುವ ಲಸಿಕೆಯನ್ನು ಸಿದ್ಧಪಡಿಸುತ್ತಿದ್ದು, 8 -12 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿ ಪರೀಕ್ಷಿಸಲು ಪ್ರಾರಂಭಿಸಿದೆ. ಸೆಪ್ಟೆಂಬರ್ 15 ರೊಳಗೆ ಮಕ್ಕಳಿಗೆ ಸಿದ್ಧವಾಗಲಿದೆ ಎಂದು ಗಮಾಲೆ ಸಂಸ್ಥೆಯ ಮುಖ್ಯಸ್ಥ ಅಲೆಕ್ಸಾಂಡರ್ ಗಿಂಟ್ಸ್ ಬರ್ಗ್ ಹೇಳಿದ್ದಾರೆ.
ಮಕ್ಕಳಿಗಾಗಿ ಸೂಜಿಯ ಬದಲು ಸ್ಪ್ರೇ ಮಾಡುವ ಲಸಿಕೆಯನ್ನು ಹಾಕಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಸಂಶೋಧನಾ ತಂಡ 8 ರಿಂದ 12 ವರ್ಷದೊಳಗಿನ ಮಕ್ಕಳ ಮೇಲೆ ಕೊರೋನಾ ಲಸಿಕೆ ಪರೀಕ್ಷಿಸಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ, ದೇಹದ ಉಷ್ಣತೆಯೂ ಹೆಚ್ಚಾಗಿಲ್ಲ ಎಂದು ಹೇಳಿದ್ದಾರೆ.
ನಮ್ಮ ಪುಟಾಣಿಗಳಿಗೆ ನೇಸಲ್ ವ್ಯಾಕ್ಸಿನ್ ನೀಡುವ ಮೂಲಕ ಕೊರೋನಾ ಲಸಿಕೆ ನೀಡುತ್ತಿದ್ದೇವೆ. ಮಕ್ಕಳ ಮೇಲಿನ ಲಸಿಕೆ ಪರಿಣಾಮದ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗಮಾಲೆ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಸಂಶೋಧನಾ ಕೇಂದ್ರ ಕೊರೋನಾ ವಿರುದ್ಧ ‘ಸ್ಪುಟ್ನಿಕ್ ವಿ’ ಲಸಿಕೆ ಅಭಿವೃದ್ಧಿಪಡಿಸಿದೆ. 2020 ರ ಆಗಸ್ಟ್ ನಲ್ಲಿ ನೀಡಲಾದ ವಿಶ್ವದ ಮೊದಲ ಅಧಿಕೃತ ನೋಂದಾಯಿತ ಲಸಿಕೆ ಇದಾಗಿದೆ. ಒಂದೇ ಡೋಸ್ ನೀಡುವ ‘ಸ್ಪುಟ್ನಿಕ್ ಲೈಟ್’ ಲಸಿಕೆಯನ್ನು ಕೂಡ ಗಮಾಲೆ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿದೆ.
ಭಾರತದಲ್ಲಿ ಕೊರೋನಾ ವೈರಸ್ ಲಸಿಕೆಗೆ ಪರ್ಯಾಯವಾಗಿ ಮೂಗಿನ ಸಿಂಪಡಣೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಸಂಶೋಧನೆ ನಡೆಯುತ್ತಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇಂಟ್ರಾ ನೇಸಲ್ ಕೋವಿಡ್ -19 ಲಸಿಕೆಯ ಬಿಬಿವಿ 154 ನ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸಿದೆ.