ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದಲ್ಲಿ ಈಗ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ ನಾಲ್ಕು ಹಂತದ ಮತದಾನ ಪೂರ್ಣಗೊಂಡಿದ್ದು, ಇನ್ನೂ ಮೂರು ಹಂತದ ಮತದಾನ ಬಾಕಿ ಇದೆ. ಜೂನ್ 4 ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ಇದೆಲ್ಲದರ ನಡುವೆ ರಷ್ಯಾ ಗಂಭೀರ ಆರೋಪವನ್ನು ಮಾಡಿದ್ದು, ಅಮೆರಿಕ, ಭಾರತದ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಅಲ್ಲದೆ ಅಲ್ಲಿನ ಆಂತರಿಕ ರಾಜಕೀಯ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿದೆ ಎಂದು ಹೇಳಿದೆ.
ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಕ್ಕೊರ್ವಾ ಈ ಕುರಿತಂತೆ ಹೇಳಿಕೆ ನೀಡಿದ್ದು, ಅಲ್ಲದೆ ಭಾರತದ ವಿರುದ್ಧ ಕೆಲವೊಂದು ಆರೋಪ ಮಾಡಿದ್ದ ಅಮೆರಿಕ ಅದಕ್ಕೆ ಸೂಕ್ತ ಸಾಕ್ಷ್ಯಾಧಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದಾರೆ.
ಅಮೇರಿಕಾದ ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಸಮಿತಿ ಇತ್ತೀಚಿಗಷ್ಟೇ, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವಿಚಾರದಲ್ಲಿ ಭಾವನೆಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿತ್ತು. ಆದರೆ ಇದಕ್ಕೆ ಖಡಕ್ ತಿರುಗೇಟು ನೀಡಿದ್ದ ಭಾರತ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿತ್ತು.
ಇದರ ಜೊತೆಗೆ ಅಮೆರಿಕ, ಖಲಿಸ್ತಾನ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುರನ್ನು ಹತ್ಯೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಹೇಳಿದ್ದು ಆದರೆ ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯ ಜಕ್ಕೊರ್ವಾ ಅಮೆರಿಕದ ಈ ಹೇಳಿಕೆ ನೀಡಿದ್ದರೂ ಸಹ ಯಾವುದೇ ಬಲವಾದ ಪುರಾವೆ ನೀಡಿಲ್ಲ ಎಂದಿದ್ದಾರೆ.