ಉಕ್ರೇನ್‌ನ ಮೇಲೆ ಆಕ್ರಮಣ ಮಾಡಿದ 13 ದಿನಗಳ ಅವಧಿಯಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾವನ್ನು ಮೀರಿಸಿ ವಿಶ್ವದಲ್ಲೇ ಅತಿ ಹೆಚ್ಚು ನಿರ್ಬಂಧಗಳಿಗೆ ಗುರಿಯಾಗಿರುವ ರಾಷ್ಟ್ರವಾಗಿದೆ. ಉಕ್ರೇನ್ ಮೇಲಿನ ದಾಳಿಯ ನಂತರ ಯುಎಸ್ ಮತ್ತು ಯುರೋಪಿಯನ್ ರಾಷ್ಟ್ರಗಳು ರಷ್ಯಾದ ಮೇಲೆ ಹಲವು ನಿರ್ಬಂಧಗಳನ್ನು ಏರಿವೆ.
ಯುದ್ಧ ಸಾರುವ ಮೊದಲೇ ಸಾಕಷ್ಟು ಜಾಗತಿಕ ನಿರ್ಬಂಧಗಳಿಗೆ ಗುರಿಯಾಗಿದ್ದ ಪುಟಿನ್ ನೇತೃತ್ವದ ದೇಶದ ಮೇಲೆ, ಯುದ್ಧ ಘೋಷಿಸಿದ ನಂತರ ಸಾವಿರಾರು ನಿರ್ಬಂಧಗಳನ್ನು ಏರಲಾಗಿದೆ. ಈವರೆಗೂ ರಷ್ಯಾದ ಮೇಲೆ ಒಟ್ಟು 2,778 ಹೊಸ ನಿರ್ಬಂಧಗಳನ್ನು ಏರಲಾಗಿದ್ದು, ನಿರ್ಬಂಧಗಳ ಪಟ್ಟಿ 5,530 ಕ್ಕೆ ಏರಿಕೆಯಾಗಿದೆ ಎಂದು ಜಾಗತಿಕ ನಿರ್ಬಂಧಗಳ-ಟ್ರ್ಯಾಕಿಂಗ್ ಡೇಟಾಬೇಸ್ ಕ್ಯಾಸ್ಟೆಲ್ಲಮ್.ಐ ನಲ್ಲಿ ತಿಳಿದು ಬಂದಿದೆ.
ರಷ್ಯಾ-ಉಕ್ರೇನ್ ಸಮರ; ವಿಶ್ವಯುದ್ಧದ ನಂತರ ಮೊದಲ ಬಾರಿ ಯೇಸುಕ್ರಿಸ್ತನ ಶಿಲ್ಪ ಸ್ಥಳಾಂತರ…!
ಇರಾನ್ ತನ್ನ ಪರಮಾಣು ಕಾರ್ಯಕ್ರಮ ಮತ್ತು ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದರಿಂದ ಕಳೆದ ದಶಕದಲ್ಲಿ ಅದರ ವಿರುದ್ಧ 3,616 ನಿರ್ಬಂಧಗಳನ್ನು ಏರಲಾಗಿದೆ. ಸಿರಿಯಾ ಮೇಲೆ 2,608, ಉತ್ತರ ಕೊರಿಯಾದ ಮೇಲೆ 2,077 ನಿರ್ಬಂಧಗಳಿವೆ. ಯುದ್ಧ ಘೋಷಿಸಿದ ನಂತರ ಅಮೇರಿಕನ್ ಎಕ್ಸ್‌ಪ್ರೆಸ್ ಕಂ. ಮತ್ತು ನೆಟ್‌ಫ್ಲಿಕ್ಸ್ ಇಂಕ್ ರಷ್ಯಾ ದೇಶದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಿವೆ. ಇದರಿಂದ ರಷ್ಯಾದ ಮೇಲೆ ಒತ್ತಡ ಹೆಚ್ಚಾಗಿದೆ.
ಇದು ಆರ್ಥಿಕ ಪರಮಾಣು ಯುದ್ಧ ಮತ್ತು ಇತಿಹಾಸದಲ್ಲಿ ಅತಿದೊಡ್ಡ ನಿರ್ಬಂಧಗಳ ಘಟನೆಯಾಗಿದೆ. ಜಾಗತಿಕ ಆರ್ಥಿಕತೆಯ ಅತಿದೊಡ್ಡ ಭಾಗವಾಗಿದ್ದ ರಷ್ಯಾ, ಜಾಗತಿಕ ನಿರ್ಬಂಧಗಳ ಏಕೈಕ ದೊಡ್ಡ ಗುರಿಯಾಗಿ ಬದಲಾಗಿದೆ. ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ಆರ್ಥಿಕ ಹಿನ್ನಡೆಗೆ ಹೋಗಿದೆ ಎಂದು ಈ ಹಿಂದೆ ಒಬಾಮಾ ಮತ್ತು ಟ್ರಂಪ್ ಆಡಳಿತದಲ್ಲಿ ಖಜಾನೆ ಇಲಾಖೆಯ ಅಧಿಕಾರಿಯಾಗಿದ್ದ ಪೀಟರ್ ಪಿಯಾಟೆಟ್ಸ್ಕಿ ತಿಳಿಸಿದ್ದಾರೆ.