ಬೆಂಗಳೂರು: ಜನವರಿಯಿಂದ ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ ಯೋಜನೆ ಆರಂಭಿಸಲಾಗುವುದು. ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ. ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ಕೆಮ್ಮು, ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗಳು, ಮಧುಮೇಹ. ಕ್ಯಾನ್ಸರ್. ಹೃದಯ ಸಂಬಂಧಿ ಗಂಭೀರ ಕಾಯಿಲೆಗಳಿಗೂ ಗ್ರಾಮೀಣ ಜನರು ದೂರದ ಆಸ್ಪತ್ರೆಗಳಿಗೆ ಹೋಗಬೇಕಿಲ್ಲ. ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಆರೋಗ್ಯ ಇಲಾಖೆಯಿಂದ ಮುಖ್ಯಮಂತ್ರಿ ಆರೋಗ್ಯವಾಹಿನಿ ಯೋಜನೆ ಜಾರಿಗೆ ಸಿದ್ಧತೆ ನಡೆಸಿದ್ದು, ಜನವರಿಯಿಂದಲೇ ಮೊದಲ ಹಂತದಲ್ಲಿ ಬೀದರ್, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಯಾಗಲಿದೆ. ಯೋಜನೆ ಯಶಸ್ಸಿನ ನಂತರ ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.
ಜಿಲ್ಲಾವಾರು ಹಳ್ಳಿಗಳ ಪಟ್ಟಿ ಮಾಡಿಕೊಂಡು ತಿಂಗಳಿಗೊಮ್ಮೆ ಹೋಗಲು ವೇಳಾಪಟ್ಟಿ ನಿಗದಿ ಮಾಡಲಾಗುವುದು. ಗ್ರಾಮದಲ್ಲಿನ ಸರ್ಕಾರಿ ಶಾಲೆ ಸಮುದಾಯ ಭವನದಲ್ಲಿ ತಾತ್ಕಾಲಿಕ ಕ್ಲಿನಿಕ್ ನಿರ್ಮಿಸಿ ಆರೋಗ್ಯ ತಪಾಸಣೆ ಮಾಡಲಾಗುವುದು.
ವಾಹನಗಳಲ್ಲಿ ಬಿಪಿ, ಮಧುಮೇಹ, ರಕ್ತ ಪರೀಕ್ಷೆಗೆ ಪೂರಕ ಉಪಕರಣ ಇರುತ್ತವೆ. ಹೃದಯ ಕಾಯಿಲೆ ಪತ್ತೆಹಚ್ಚಲು ಇಸಿಜಿ, ಎಕೋಕಾರ್ಡಿಯಾ ಪರೀಕ್ಷೆ, ಕ್ಯಾನ್ಸರ್ ರೋಗ ಪತ್ತೆ ಪರೀಕ್ಷೆ, ಕಣ್ಣಿನ ತಪಾಸಣೆ, ಬಾಯಿ ಆರೋಗ್ಯ ತಪಾಸಣೆಗೆ ಅಗತ್ಯ ಉಪಕರಣ ಔಷಧ ಇರಲಿವೆ.
ಪಾರ್ಶ್ವವಾಯು, ಶ್ವಾಸಕೋಶ ಸಂಬಂಧಿತ ಸಮಸ್ಯೆ, ಮೂಳೆ ತಪಾಸಣೆ, ಕಣ್ಣು, ಮೂಗು, ಗಂಟಲು, ದಂತ ಮತ್ತು ಬಾಯಿ ಆರೋಗ್ಯದ ಪರೀಕ್ಷೆ ಇರಲಿದೆ. ವೈದ್ಯರೇ ಗ್ರಾಮಕ್ಕೆ ಹೋಗುವುದರಿಂದ ಜನ ದೂರದ ಆಸ್ಪತ್ರೆಗಳಿಗೆ ಹೋಗಬೇಕಿಲ್ಲ. ಅನೇಕರಿಗೆ ಚಿಕ್ಕವಯಸ್ಸಿನಲ್ಲಿ ಅಸಾಂಕ್ರಾಮಿಕ ಕಾಯಿಲೆ ಕಾಡುತ್ತಿದ್ದು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು. ಆರೋಗ್ಯ ತಪಾಸಣೆಗೆ ನಿರ್ಲಕ್ಷ ವಹಿಸುತ್ತಿವವರಿಗೂ ಮನೆ ಬಾಗಿಲಲ್ಲೇ ಚಿಕಿತ್ಸೆ ಸಿಗುವುದರಿಂದ ಅನುಕೂಲವಾಗಲಿದೆ. ವೃದ್ಧರಿಗೆ ಎಲ್ಲಾ ಬಗೆಯ ಆರೋಗ್ಯ ತಪಾಸಣೆ ಮಾಡಲಾಗುವುದು. ಎಲ್ಲಾ ವಯೋಮಾನದವರಿಗೆ ನೇತ್ರ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯಗಳು ಇರಲಿವೆ.