ಬೆಂಗಳೂರು: ಗ್ರಾಮೀಣ ಕೃಪಾಂಕದ ವಿಶೇಷ ನಿಯಮಗಳ ಅನ್ವಯ ನೇಮಕವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ 2013 ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎರಡು ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಲು ಸರ್ಕಾರ ಸಮ್ಮತಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೊಂದಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ನೇತೃತ್ವದಲ್ಲಿ ಗ್ರಾಮೀಣ ಕೃಪಾಂಕ ಆಧಾರಿತ ನೌಕರರು ಸಮಾಲೋಚನೆ ನಡೆಸಿದ್ದು, ಸೇವಾ ಜೇಷ್ಠತೆಗೆ ಪಿಂಚಣಿಗೆ ಹಿಂದಿನ ಸೇವೆಯನ್ನು ಪರಿಗಣಿಸಲು ಒಪ್ಪಿಗೆ ನೀಡಿದೆ.
1997 -98 ರಲ್ಲಿ ಶೇಕಡ 10 ರಷ್ಟು ಗ್ರಾಮೀಣ ಕೃಪಾಂಕ ಪಡೆದು ನೇಮಕವಾಗಿದ್ದ ಶಿಕ್ಷಕರ ಪಟ್ಟಿಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಪರಿಷ್ಕರಿಸಲಾಗಿದ್ದು, 2003ರಲ್ಲಿ ನಗರ ಪ್ರದೇಶದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಪಟ್ಟಿಯಿಂದ ಹೊರಗುಳಿದ 1,700 ಶಿಕ್ಷಕರನ್ನು ವಜಗೊಳಿಸಿ, 4 ತಿಂಗಳ ಬಳಿಕ ಮಾನವೀಯತೆ ದೃಷ್ಟಿಯಿಂದ ಅವರಿಗೆ ಮಾತ್ರ ಕೆಲಸ ನೀಡಲಾಗಿತ್ತು. ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ನಗರ ಪ್ರದೇಶದ ಅಭ್ಯರ್ಥಿಗಳ ಸೇವೆಯನ್ನು 1997 -98 ರಿಂದಲೇ ಪೂರ್ವಾನ್ವಯವಾಗುವಂತೆ ಮಾಡಲಾಗಿದೆ. ಆದರೆ ಮರು ನೇಮಕಗೊಂಡ ಗ್ರಾಮೀಣ ಶಿಕ್ಷಕರಿಗೆ ತಾರತಮ್ಯ ಮಾಡಲಾಗಿತ್ತು. ಇದಕ್ಕಾಗಿ ನಿರಂತರ ಹೋರಾಟ ನಡೆಸಲಾಗಿತ್ತು. ಈಗ ಗ್ರಾಮೀಣ ಕೃಪಾಂಕ ಶಿಕ್ಷಕರ ವೇತನ ಬಡ್ತಿಗೆ ಸರ್ಕಾರ ಸಮ್ಮತಿಸಿದೆ.