ಬೆಂಗಳೂರು: ಎಂಬಿಬಿಎಸ್ ಮತ್ತು ಸ್ನಾತಕೋತ್ತರ ಪದವಿ ವೈದ್ಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂಬ ನಿಯಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾತ್ಕಾಲಿಕವಾಗಿ ತಡೆ ನೀಡಿದೆ.
ಇದರಿಂದಾಗಿ ಎಂಬಿಬಿಎಸ್ ವಿದ್ಯಾರ್ಥಿಗಳು ಕೊಂಚ ನಿರಾಳರಾಗಿದ್ದಾರೆ. ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಒಂದು ವರ್ಷ ಗ್ರಾಮೀಣ ಸೇವೆ ಸಲ್ಲಿಸಿದರೆ ವೈದ್ಯರ ಕೊರತೆ ಸ್ವಲ್ಪ ನೀಗುತ್ತದೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಗ್ರಾಮೀಣ ಸೇವೆ ಕಡ್ಡಾಯ ಮಾಡಿದೆ.
ಆದರೆ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸಲು ವೈದ್ಯರೇ ಆಸಕ್ತಿ ತೋರದ ಕಾರಣ ವಿದ್ಯಾರ್ಥಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದರು.
ಸೆಪ್ಟೆಂಬರ್ ನಲ್ಲಿ ಪಿಜಿ ನೀಟ್ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಬೇಕಿದ್ದು, ಇದರಿಂದ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಪ್ರವೇಶ ಪಡೆಯುತ್ತಾರೆ. ಇದರಿಂದ ಅಲ್ಪಮಟ್ಟಿನ ವೈದ್ಯರ ಕೊರತೆ ನೀಗಲಿದೆ. ಕೌನ್ಸೆಲಿಂಗ್ ಗೆ ಮೊದಲೇ ವಿದ್ಯಾರ್ಥಿಗಳನ್ನು ಗ್ರಾಮೀಣ ಪ್ರದೇಶಕ್ಕೆ ಕಳುಹಿಸಿದ್ದಲ್ಲಿ ಖಾಲಿ ಇರುವ ವೈದ್ಯ ಹುದ್ದೆಗಳ ಅಂಕಿ ಅಂಶಗಳಲ್ಲಿ ವ್ಯತ್ಯಾಸವಾಗುತ್ತದೆ. ಆಗ ಸಮರ್ಪಕವಾಗಿ ವೈದ್ಯ ವಿದ್ಯಾರ್ಥಿಗಳ ನಿಯೋಜನೆ ಆಗುವುದಿಲ್ಲ.
ಈ ಹಿನ್ನೆಲೆಯಲ್ಲಿ ವೈದ್ಯ ವಿದ್ಯಾರ್ಥಿಗಳು ಗ್ರಾಮೀಣ ಸೇವೆಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಾರ, ಸೆ. 19 ರಿಂದ 22ರವರೆಗೆ ದಾಖಲಾತಿ ಪ್ರಕ್ರಿಯೆ ನಡೆಯಬೇಕಿತ್ತು. ಸೆ. 23 ರಂದು ಅಣಕು ಫಲಿತಾಂಶ, 25ರಂದು ನೈಜ ಫಲಿತಾಂಶ ಪ್ರಕಟಿಸಬೇಕಿತ್ತು. ಸದ್ಯಕ್ಕೆ ಆರೋಗ್ಯ ಇಲಾಖೆ ಈ ಪ್ರಕ್ರಿಯೆ ತಡೆ ಹಿಡಿದಿದೆ.