ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ಕಾರಾಗೃಹ ಸಿಬ್ಬಂದಿಯ ಕಳ್ಳಾಟ ಬಯಲಾಗಿದೆ.
ಜೈಲಿನ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ದರ್ಶನ್ ಗೆ ವಿಶೇಷ ಆತಿಥ್ಯ ನೀಡಿದ್ದರು ಎನ್ನುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ದರ್ಶನ್ ಗೆ ವಿಶೇಷ ಆತಿಥ್ಯ ನೀಡಿದ್ದ ಫೋಟೋ, ವಿಡಿಯೋ ಬಹಿರಂಗವಾದ ನಂತರ ಸರ್ಕಾರ ಜೈಲಿನ 9 ಅಧಿಕಾರಿಗಳು, ಸಿಬ್ಬಂದಿಗಳನ್ನು ಅಮಾನತು ಮಾಡಿತ್ತು. ಪ್ರಕರಣದ ತನಿಖೆಗೆ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ನೇತೃತ್ವದ ವಿಶೇಷ ತಂಡ ರಚಿಸಿದ್ದು, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
ಪೊಲೀಸರ ತನಿಖೆಯ ವೇಳೆ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಹಣದಾಸೆಗೆ ದರ್ಶನ್ ಮತ್ತು ಸಹಚರರಿಗೆ ವಿಶೇಷ ಆತಿಥ್ಯ ಕಲ್ಪಿಸಿರುವುದು ಗೊತ್ತಾಗಿದೆ. ದರ್ಶನ್ ಮತ್ತು ಅವರೊಂದಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದ ರೌಡಿಶೀಟರ್ ಗಳಾದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಸೇರಿದಂತೆ ಹಲವರಿಗೆ ಟೇಬಲ್, ಚೇರ್, ಕಾಫಿ ಮಗ್, ಸಿಗರೇಟ್ ನೀಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಜೈಲಿಂದ ಹೊರಗಿರುವ ದರ್ಶನ್ ಆಪ್ತರಿಂದ ಕಾರಾಗೃಹದ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಂಚದ ರೂಪದಲ್ಲಿ ಲಕ್ಷಾಂತರ ರೂಪಾಯಿ ಸಂದಾಯವಾಗಿದ್ದು, ಇದಕ್ಕೆ ಪ್ರತಿಯಾಗಿ ರಾಜಾತಿಥ್ಯ ಕಲ್ಪಿಸಿದ್ದರು ಎಂದು ಹೇಳಲಾಗಿದೆ.