ದೇಶಾದ್ಯಂತ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳುವವರಿಗೆ ಇಲ್ಲಿಯವರೆಗೆ ವಿಧಿಸಲಾದ ಅರ್ಹತಾ ಮಾನದಂಡಗಳಲ್ಲಿ ಕೆಲ ಬದಲಾವಣೆಗಳನ್ನ ಮಾಡಲು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಮುಂದಾಗಿದೆ.
ಆಹಾರ ಹಾಗೂ ನಾಗರಿಕ ಸರಬರಾಜು ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುವ ಈ ಇಲಾಖೆಯು ಮಾನದಂಡಗಳ ಬದಲಾವಣೆ ಕುರಿತಂತೆ ಹಲವು ಸುತ್ತಿನ ಸಭೆಗಳನ್ನ ನಡೆಸಿದೆ. ಅರ್ಹತಾ ಮಾನದಂಡದ ಸ್ವರೂಪವನ್ನ ಬಹುತೇಕ ಫೈನಲ್ ಮಾಡಲಾಗಿದೆ. ಇದೇ ತಿಂಗಳಲ್ಲಿ ಹೊಸ ಮಾನದಂಡವು ಜಾರಿಗೆ ಬರುವ ನಿರೀಕ್ಷೆ ಇದೆ. ಈ ಹೊಸ ಮಾನದಂಡದ ಅಡಿಯಲ್ಲಿಯೇ ಇನ್ಮುಂದೆ ಫಲಾನುಭವಿಗಳು ಯಾರೆಂಬುದು ನಿರ್ಧಾರವಾಗಲಿದೆ.
ಈ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ, ದೇಶದ ಹಲವೆಡೆ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಪಡಿತರವನ್ನ ಪಡೆಯುತ್ತಿದ್ದಾರೆ. ಆದರೆ ಇದರಲ್ಲಿ ಅನೇಕರು ಆರ್ಥಿಕವಾಗಿ ಸದೃಢ ಇರುವವರೂ ಸೇರಿದ್ದಾರೆ. ಇದೇ ಕಾರಣಕ್ಕಾಗಿ ಸಚಿವಾಲಯು ಅರ್ಹತಾ ಮಾನದಂಡಗಳಲ್ಲಿ ಕೆಲ ಬದಲಾವಣೆಗಳನ್ನ ಮಾಡಲು ನಿರ್ಧರಿಸಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ, ಪಡಿತರ ಅರ್ಹತಾ ಮಾನದಂಡಗಳನ್ನ ನವೀಕರಿಸುವ ಬಗ್ಗೆ ಕಳೆದ ಆರು ತಿಂಗಳಿನಿಂದ ವಿವಿಧ ರಾಜ್ಯಗಳ ಜೊತೆ ಸಭೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.