ಬೆಂಗಳೂರು: 2021 ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಸಾಂಕ್ರಾಮಿಕ ಕಾಯಿಲೆ ಕೋವಿಡ್-19 ಹರಡುವಿಕೆಯನ್ನು ತಡೆಯುವ ಸಲುವಾಗಿ ವಹಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಸರ್ಕಾರದ ಆದೇಶದನ್ವಯ ಹೊಸ ವರ್ಷ ಆಚರಣೆಯ ಸಂದರ್ಭಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಕೋವಿಡ್ -19 ಹರಡುವಿಕೆಯನ್ನು ತಡೆಯುವ ಸಲುವಾಗಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಸಾರ್ವಜನಿಕರು ಕೆಳಕಂಡ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು.
1) ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಿದೆ.
2) ದಿಃ- 30-12-2020 ರಿಂದ ದಿಃ- 02-01-2021 ರ ವರೆಗೆ ಕ್ಲಬ್/ ಪಬ್/ ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಸ್ಥಳ/ ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿಜೆ–ಡ್ಯಾನ್ಸ್ ಕಾರ್ಯಕ್ರಮ, ವಿಶೇಷ ಪಾರ್ಟಿ ಇತ್ಯಾದಿ ನಿಷೇದಿಸಿದೆ. ಆದರೆ ಕ್ಲಬ್/ ಪಬ್/ರೆಸ್ಟೋರೆಂಟ್ ಗಳನ್ನು ಪ್ರತಿನಿತ್ಯದಂತೆ ತೆರೆದಿದ್ದು ನಡೆಸಲು ನಿರ್ಭಂಧವಿಲ್ಲ.
3) ಹೊಸ ವರ್ಷಾಚರಣೆಯ ಸಂಬಂಧದಲ್ಲಿ ಸಾರ್ವಜನಿಕ ಸ್ಥಳದಲ್ಲಿ, ಮುಖ್ಯ ರಸ್ತೆಗಳಲ್ಲಿ ಮತ್ತು ಸಾಮಾಜಿಕ ಅಂತರವಿಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಿದೆ. ಆದರೆ ಈ ಸ್ಥಳಗಳಲ್ಲಿ ಪ್ರತಿನಿತ್ಯದ ಸಾಮಾನ್ಯ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಭಂದವಿರುವುದಿಲ್ಲ.
4) ಸರ್ಕಾರದ ಆದೇಶದಂತೆ 65 ವರ್ಷಕ್ಕೆ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೋಟೆಲ್ ಗಳು/ ಮಾಲ್ ಗಳು/ ಪಬ್ /ರೆಸ್ಟೋರೆಂಟ್ ಗಳು ಹಾಗೂ ಅಂತಹ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಇರಿಸತಕ್ಕದ್ದು.
5) ಹೋಟೆಲ್ ಗಳು / ಮಾಲ್ ಗಳು/ ಪಬ್ / ರೆಸ್ಟೋರೆಂಟ್ ಗಳು ಹಾಗೂ ಅಂತಹ ಸ್ಥಳ/ ಪ್ರದೇಶಗಳಲ್ಲಿ ಅದರ ಮಾಲೀಕರು ಕಡ್ಡಾಯವಾಗಿ ಸರ್ಕಾರದ ಆದೇಶದಂತೆ ಕೋವಿಡ್-19 ರ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರದಿಂದ ಜನರು ಸೇರಲು ಜಾಗೃತೆ ವಹಿಸುವುದು. ಅಗತ್ಯವಿದ್ದಲ್ಲಿ ಜನರನ್ನು ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್ ಲೈನ್ ಮುಖಾಂತರ / ಟೋಕನ್ ಪದ್ದತಿಯಲ್ಲಿ ಸ್ಥಳ ಕಾಯ್ದಿರಿಸಲು ವ್ಯವಸ್ಥೆಯನ್ನು ಕಲ್ಪಿಸುವುದು.
6) ಪ್ರಾಂಗಣಗಳಲ್ಲಿ, ಉಪಹಾರ ಸ್ಥಳಗಳಲ್ಲಿ, ವ್ಯವಸ್ಥಿತ ಕಟ್ಟಡ ಸಮುಚ್ಚಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸತಕ್ಕದ್ದು.
7) ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚತಕ್ಕದ್ದು ಹಾಗೂ ಇತರರಿಗೆ ತೊಂದರೆಯಾಗುವ ರೀತಿ ಪಟಾಕಿ ಸುಡುವುದನ್ನು ನಿಷೇಧಿಸಿದೆ.
8) ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಿಗಳು ತಪ್ಪದೇ ಕಟ್ಟು ನಿಟ್ಟಾಗಿ ಪಾಲಿಸತಕ್ಕದ್ದು.
9) ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ – 2005 ಹಾಗೂ ಭಾರತ ದಂಡ ಸಂಹಿತೆ ಕಲಂ 188 ರ ಅಡಿಯಲ್ಲಿ ಶಿಸ್ತಿನ/ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.
10) ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡಬಾರದು. ಪಾನಮತ್ತರಾಗಿ ವಾಹನ ಚಾಲನೆ ಮಾಡಿದವರ ಮೇಲೆ ಡ್ರಂಕ್ & ಡ್ರೈವ್ ಪ್ರಕರಣ ದಾಖಲಿಸಿ, ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲು ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
11) ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದಾಗಲೀ, ದ್ವಿಚಕ್ರ ವಾಹನದಲ್ಲಿ ಮೂರು ಜನ ಸವಾರಿ ಮಾಡುವುದು, ಸಾಹಸ ಪ್ರದರ್ಶನ/ವೀಲಿಂಗ್ ನಡೆಸುವುದು ನಿಷೇಧಿಸಿದೆ. ಇಲಾಖಾ ವತಿಯಿಂದ ಚುರುಕು ಪ್ರತಿಕ್ರಿಯಿಸುವ ತಂಡ ಮತ್ತು ಕಾವಲು ಪಡೆಯನ್ನು ರಚಿಸಿದ್ದು, ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
12) ಶುಭಾಶಯ ಕೋರುವ ನೆಪದಲ್ಲಿ ರಸ್ತೆಯ ಮೇಲೆ ಮನಬಂದಂತೆ ಓಡಾಡುವುದನ್ನು ನಿಷೇಧಿಸಿದೆ ಮತ್ತು ಸಾಮಾಜಿಕ ಅಂತರ ಉಲ್ಲಂಘನೆ ಆಗದಂತೆ ಸೂಕ್ತ ಎಚ್ಚರಿಕೆ ವಹಿಸುವುದು.
13) ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು / ಜೂಜಾಟಗಳನ್ನು/ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇಧಿಸಿದೆ.
14) ಹೊಸವರ್ಷಾಚರಣೆಯ ನೆಪದಲ್ಲಿ ದುರ್ವರ್ತನೆ ತೋರಬಾರದು.
15) ಅಬಕಾರಿ ಕಾಯ್ದೆ ಅಡಿಯಲ್ಲಿ ಪರವಾನಗಿ ಅನ್ವಯ ಮಧ್ಯ ಮಾರಾಟ ವೇಳೆಯನ್ನು ಅನುಸರಿಸುವುದು.
16) ರಸ್ತೆಯಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಿದೆ.
17 )ಕರ್ತವ್ಯ ನಿರತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ನೀಡುವ ಸೂಚನೆ ಪಾಲಿಸುವುದು.
18) ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಸರಹದ್ದಿನ ಪೊಲೀಸ್ ಠಾಣೆಗೆ ಸಂಪರ್ಕಿಸುವುದು.